ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಭಾರತೀಯ ಫಲವತ್ತತೆ ತಜ್ಞರ ತಂಡವು ಇದೆ ಮೊದಲ ಬಾರಿಗೆ ಕೋವಿಶೀಲ್ಡ್ ಲಸಿಕೆಗಳನ್ನು ಪಡೆದ ಪುರುಷರಲ್ಲಿ ವೀರ್ಯದ ಗುಣಮಟ್ಟದಲ್ಲಿನ ಬದಲಾವಣೆಗಳ ಪ್ರಾಯೋಗಿಕ ಸಂಶೋಧನೆ ನಡೆಸಿದೆ. ಸಂಶೋಧನಾ ವರದಿಯನ್ನು ಸೆ 5 ರಂದು ಯುಕೆ ಮೂಲದ ಸೊಸೈಟಿ ಫಾರ್ ರಿಪ್ರೊಡಕ್ಷನ್ ಎಂಡ್ ಫರ್ಟಿಲಿಟಿ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.
ಕೋವಿಡ್ ಲಸಿಕೆ ಪಡೆದ ನಂತರ ಪುರುಷರಲ್ಲಿ ಫಲವತ್ತತೆ ನಶಿಸಿ ಹೋಗುತ್ತದೆ ಎಂಬ ವರದಿಗಳನ್ನು ಆಧರಿಸಿ ಬಹುತೇಕ ಪುರುಷರು ಲಸಿಕೆಯನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು. ಲಸಿಕೆಯು ಪುರುಷರ ವೀರ್ಯದ ಗುಣಮಟ್ಟದ ಮೇಲೆ ಮತ್ತು ಅವರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆಲವರು ನಂಬಿದ್ದರು. ಆದರೆ ಮಾಹೆಯ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ತಂಡವು ಸಂಶೋಧನೆಗಳನ್ನು ನಡೆಸಿದ್ದು, ಕೋವಿಶೀಲ್ಡ್ ಲಸಿಕೆಯು ಪುರುಷ ಫಲವತ್ತತೆಯ ಸಾಮರ್ಥ್ಯಕ್ಕೆ ಹಾನಿಕಾರಕವಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ.
ಇದಕ್ಕಾಗಿ ಸಂಶೋಧನಾ ತಂಡವು 3 ಪುರುಷ ಪ್ರಯೋಗಾರ್ಥಿಗಳಲ್ಲಿ ಲಸಿಕೆಯ ಪರಿಣಾಮವನ್ನು ಗಮನಿಸಿದೆ. ಈ ಪ್ರಯೋಗಾರ್ಥಿಗಳು ಲಸಿಕೆಯ ಮೊದಲನೆ ಡೋಸ್ ಅನ್ನು ಸ್ವೀಕರಿಸುವ ಮೊದಲು, ಲಸಿಕೆ ತೆಗೆದುಕೊಂಡ 2 ತಿಂಗಳ ಬಳಿಕ ಹಾಗೂ ಎರಡೂ ಡೋಸ್ ಗಳನ್ನು ತೆಗೆದುಕೊಂಡ ಬಳಿಕ ತಮ್ಮ ವೀರ್ಯ ಮಾದರಿಗಳನ್ನು ಒದಗಿಸಿದ್ದಾರೆ. ಈ ಎಲ್ಲಾ ಅವಧಿಗಳಲ್ಲಿ ವೀರ್ಯದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ ಫಲಿತಾಂಶಗಳನ್ನು ಕಂಡುಕೊಳ್ಳಲಾಗಿದೆ.
ಕೋವಿಶೀಲ್ಡ್ ಲಸಿಕೆಯನ್ನು ಪಡೆದ ಪ್ರಯೋಗಾರ್ಥಿಗಳ ಫಲವತ್ತತೆಯ ಅಧ್ಯಯನದಿಂದ ಕಂಡುಕೊಳ್ಳಲಾದ ವಿಚಾರಗಳು:
- ವೀರ್ಯದ ಗುಣಮಟ್ಟ ಅಂದರೆ ವೀರ್ಯ ಸಂಖ್ಯೆ, ಚಲನಶೀಲತೆಯ ಗುಣಲಕ್ಷಣಗಳು ಮತ್ತು ರಚನೆ (ರೂಪವಿಜ್ಞಾನ) ಇವು
ಸಂಗಾತಿಯಲ್ಲಿ ಯಶಸ್ವಿ ಗರ್ಭಧಾರಣೆಯನ್ನು ಸ್ಥಾಪಿಸಲು ಕೋವಿಶೀಲ್ಡ್ ಲಸಿಕೆಯಿಂದ ಪ್ರಭಾವಿತವಾಗಿಲ್ಲ.
2. ಲಸಿಕೆಗಳನ್ನು ಪಡೆದ ಯಾವುದೇ ಪ್ರಯೋಗಾರ್ಥಿಗಳು ಅಜೋಸ್ಪೆರ್ಮಿಯಾ (ವೀರ್ಯದ ಸಂಪೂರ್ಣ ಅನುಪಸ್ಥಿತಿ), ಸ್ತೇನೋಜೂಸ್ಪೆರ್ಮಿಯಾ (ಚಲನಶೀಲತೆಯ ಕೊರತೆ) ಅಥವಾ ಟೆರಾಟೋಜೂಸ್ಪೆರ್ಮಿಯಾ (ರಚನಾತ್ಮಕ ದೋಷಗಳು) ಮುಂತಾದ ಅಸಹಜತೆಗಳನ್ನು ಹೊಂದಿರಲಿಲ್ಲ.
ಕೋವಿಡ್-19 ಗೆ ಧನಾತ್ಮಕ ಪರೀಕ್ಷೆ ಮಾಡಿದವರು ಅಥವಾ ರೋಗಲಕ್ಷಣಗಳನ್ನು ಹೊಂದಿರುವವರರನ್ನು ಅಧ್ಯಯನದಲ್ಲಿ ಸೇರಿಸಲಾಗಿರಲಿಲ್ಲ.
ಕೋವಿಡ್ 19 ವಿರುದ್ಧದ ಲಸಿಕೆಗಳು ವೀರ್ಯದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂಬುದಕ್ಕೆ ಈ ಅಧ್ಯಯನವು ಪ್ರಾಥಮಿಕ ಸಾಕ್ಷ್ಯವನ್ನು ಒದಗಿಸುತ್ತದೆ. ಆದುದರಿಂದ ಯಾರೂ ಕೂಡಾ ಭಯಪಡುವ ಅಗತ್ಯವಿಲ್ಲ ಮತ್ತು ಕೋವಿಡ್ ಲಸಿಕೆಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಪಡೆದುಕೊಳ್ಳಬಹುದು ಎಂದು ಅಧ್ಯಯನ ತಂಡವು ತಿಳಿಸಿದೆ.