ವಿಶೇಷ ಮಕ್ಕಳ‌ ಸೇವೆ ದೇವರು ನೀಡಿದ ಅವಕಾಶ: ಮ್ಯಾಥ್ಯೂವಾಸ್

ಉಡುಪಿ: ‌ವಿಶೇಷ ಮಕ್ಕಳನ್ನು ನೋಡಿಕೊಳ್ಳುವವರು ಸೇವಾ ಮನೋಭಾವನೆ ಹೊಂದಬೇಕು. ಇಲ್ಲದಿದ್ದರೆ ಆ ಕಾರ್ಯವನ್ನು ಪರಿಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ವಿಶೇಷ ಮಕ್ಕಳ ಸೇವೆ ಮಾಡುವುದು ವೃತ್ತಿಯಲ್ಲ, ಅದೊಂದು ದೇವರು ನೀಡಿದ ಅವಕಾಶ ಎಂದು ಕಿನ್ನಿಗೋಳಿ ಸೇಂಟ್‌ ಮೇರಿಸ್‌ ವಿಶೇಷ ಶಾಲೆಯ ಸಂಚಾಲಕ ಹಾಗೂ ಧರ್ಮಗುರು ಮ್ಯಾಥ್ಯೂವಾಸ್‌ ಹೇಳಿದರು. ಕರ್ನಾಟಕ ರಾಜ್ಯ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ವತಿಯಿಂದ ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ಹಾಗೂ ಶಿಕ್ಷಕೇತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ವಿಶೇಷ ಮಕ್ಕಳ ಶಾಲೆಯ ಶಿಕ್ಷಕರು ಸಂಘಟಿತರಾಗಬೇಕು. ತಮ್ಮ ಬೇಡಿಕೆ ಈಡೇರಿರುವವರೆಗೆ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನವನ್ನು ಮುಂದುವರಿಸಬೇಕು ಎಂದು ಕರೆನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬಡಗುಬೆಟ್ಟು ಕೋ–ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್‌ ಮಾತನಾಡಿ, ವಿಶೇಷ ಮಕ್ಕಳನ್ನು ಲಾಲನೆ ಪಾಲನೆ ಮಾಡುವ ಶಿಕ್ಷಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಆದರೆ ವಿಶೇಷ ಮಕ್ಕಳ ರಕ್ಷಣೆ ವಿಚಾರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಾದ ಅಗತ್ಯವಿದೆ ಎಂದರು.

ಕರ್ನಾಟಕ ರಾಜ್ಯ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ವಸಂತ ಕುಮಾರ್‌ ಶೆಟ್ಟಿ ಮಾತನಾಡಿ, ಮಕ್ಕಳ ರಕ್ಷಣೆಗಾಗಿ ಆರಂಭಿಸಲಾದ ಮಕ್ಕಳ ಕಲ್ಯಾಣ ಸಮಿತಿಯು ವಿವಿಧ ಕಾನೂನುಗಳ ಮೂಲಕ ವಿಶೇಷ ಮಕ್ಕಳ ಶಾಲೆಗಳ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ. ಇಂದು ವಿಶೇಷ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಹಾಗಾಗಿ ಸರ್ಕಾರ ಈ ಬಗ್ಗೆ ಹೆಚ್ಚು ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದರು.

ಸಂಘದ ಅಧ್ಯಕ್ಷೆ ಆಗ್ನೇಸ್‌ ಕುಂದರ್‌ ಸ್ವಾಗತಿಸಿದರು. ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ಕಾಂತಿ ಹರೀಶ್‌ ವಂದಿಸಿದರು. ರವೀಂದ್ರ ಕಾರ್ಯಕ್ರಮ ನಿರೂಪಿಸಿದರು.