ಕುಂದಾಪುರ: ಮನೆಯೊಳಗೆ ತಾಯಿಯೊಂದಿಗೆ ಮಲಗಿದ್ದ ಪುಟಾಣಿ ಹೆಣ್ಣು ಮಗುವೊಂದನ್ನು ಮುಸುಕುಧಾರಿ ವ್ಯಕ್ತಿಯೋರ್ವ ಅಪಹರಣ ಮಾಡಿದ ಆತಂಕಕಾರಿ ಘಟನೆ ಸಿದ್ದಾಪುರ ಸಮೀಪದ ಯಡಮೊಗೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುಮ್ಟಿಬೇರು ಎಂಬಲ್ಲಿ ಗುರುವಾರ ನಸುಕಿನ ಜಾವದಲ್ಲಿ ನಡೆದಿದೆ.
ಮಗು ಅಪಹರಣ ಪ್ರಕರಣ ಸದ್ಯ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದು ಮಗುವಿನ ತಾಯಿ ಪೊಲೀಸರಿಗೆ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.
ಎಡಮೊಗೆಯ ಕುಮ್ಟಿಬೇರು ನಿವಾಸಿ ಸಂತೋಷ ನಾಯ್ಕ್ ಮತ್ತು ರೇಖಾ ದಂಪತಿಗಳ ಒಂದು ವರ್ಷ ಮೂರು ತಿಂಗಳು ಪ್ರಾಯದ ಸಾನ್ವಿಕಾ ನಾಪತ್ತೆಯಾದ ಕಂದಮ್ಮ.
ಹೊಸಂಗಡಿ ಸಂಡೂರಿನ ಪವರ್ ಹೌಸ್’ನಲ್ಲಿ ಸಂತೋಷ್ ನಾಯ್ಕ್ ಸೆಕ್ಯೂರಿಟಿ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದು ಕೆಲವೊಮ್ಮೆ ರಾತ್ರಿ ಪಾಳಿ ಇರುವಾಗ ರೇಖಾ ಐದು ವರ್ಷದ ಗಂಡು ಮಗು ಮತ್ತು ಸಾನ್ವಿಕಾ ಹಾಗೂ ಸಂತೋಷ್ ತಾಯಿ ಮನೆಯಲ್ಲಿರುತ್ತಿದ್ದರು. ಗುರುವಾರ ರಾತ್ರಿ ಸಂತೋಷ್ ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ್ದು ಅವರ ತಾಯಿ ಮಗಳ ಮನೆಗೆ ನಾಟಿ ಕಾರ್ಯಕ್ಕೆ ತೆರಳಿದ್ದು ರೇಖಾ ಮತ್ತು ಇಬ್ಬರು ಮಕ್ಕಳು ಮಾತ್ರ ಮನೆಯಲ್ಲಿದ್ದರು.
ಮಗುವಿನ ತಾಯಿ ಹೇಳೋದೆನು?
ಗುರುವಾರ ಮುಂಜಾನೆ 4-5 ಗಂಟೆ ವೇಳೆ ಹಿಂಬಾಗಿಲಿನಿಂದ ಮನೆ ಪ್ರವೇಶಿಸಿದ ಮುಸುಕುಧಾರಿ ವ್ಯಕ್ತಿಯೋರ್ವ ರೇಖಾ ಜೊತೆ ಮಲಗಿದ ಮಗುವನ್ನು ಹೊತ್ತೊಯ್ದಿದ್ದನು. ಮಗುವಿನ ಅಳು ಹಾಗೂ ಬಾಗಿಲ ಶಬ್ದ ಕೇಳಿಸಿಕೊಂಡ ರೇಖಾ ಆಗಂತುಕನ ಹಿಂದೆ ಇನ್ನೋರ್ವ ಮಗನೊಂದಿಗೆ ಹಿಂಬಾಲಿಸಿದ್ದರು ಎನ್ನಲಾಗಿದೆ. ಮಗುವನ್ನು ಅಪಹರಿಸಿದ ಅಪರಿಚಿತ ವ್ಯಕ್ತಿ ರೇಖಾ ಮನೆ ಸಮೀಪದಲ್ಲಿನ ಕುಬ್ಜಾ ನದಿಯಲ್ಲಿಳಿದು ಪರಾರಿಯಾಗಿದ್ದಾನೆ. ಇತ್ತ ಮಗುವನ್ನು ರಕ್ಷಿಸಿಕೊಳ್ಳಲು ರೇಖಾ ತನ್ನ ಮಗನೊಂದಿಗೆ ನದಿಗಿಳಿದಿದ್ದರು. ತುಂಬಿ ಹರಿವ ನದಿಯಲ್ಲಿ ತಾಯಿ, ಮಗ ಕೊಚ್ಚಿಹೋಗುವ ಸ್ಥಿತಿಯಲ್ಲಿದ್ದು ಅವರ ಕೂಗಾಟ ಕೇಳಿ ಸ್ಥಳೀಯರು ಬಂದು ತಾಯಿ ಮತ್ತು ಹಿರಿಯ ಮಗನನ್ನು ರಕ್ಷಿಸಿದ್ದಾರೆ. ಆದರೆ ಸಾನ್ವಿಕಾಳನ್ನು ಮಾತ್ರ ಆಗಂತುಕ ನದಿಯಲ್ಲಿ ಸಾಗಿ ಕರೆದೊಯ್ದಿದ್ದಾನೆ ಎನ್ನಲಾಗಿದೆ.
ಇನ್ನು ಮಗುವಿನ ಅಪಹರಣ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದ್ದು, ಮಗುವಿನ ನಿಗೂಢ ನಾಪತ್ತೆ ಪ್ರಕರಣ ಪೊಲೀಸರ ಸಮಗ್ರ ತನಿಖೆಯಿಂದಷ್ಟೆ ಬಯಲಾಗಬೇಕಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಗಂಭೀರ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಮಗುವಿನ ತಂದೆ-ತಾಯಿ ಹಾಗೂ ಐದು ವೃಷದ ಸಹೋದರನನ್ನು ಮತ್ತು ಸ್ಥಳೀಯರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೇ ಸ್ಥಳೀಯ ಮುಳುಗು ತಜ್ಞರ ಸಹಾಯದಿಂದ ಕುಬ್ಜಾ ನದಿಯಲ್ಲಿ ಮಗುವಿಗಾಗಿ ಹುಡುಕಾಟ ಆರಂಭಿಸಿದ್ದು, ಅಗ್ನಿಶಾಮಕ ದಳದ ಸಿಬ್ನಂದಿಗಳ ನೆರವು ಪಡೆದಿದ್ದಾರೆ.
ಎಸ್.ಪಿ ಭೇಟಿ:
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಸಿಪಿಐ ಮಂಜಪ್ಪ ಡಿ.ಆರ್., ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿ ಪ್ರಕಾಶ್, ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್, ಡಿಸಿಐಬಿ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ವಿವಿಧ ಆಯಾಮದ ತನಿಖೆ ಹಿನ್ನೆಲೆ ಶ್ವಾನದಳ, ಅಗ್ನಿಶಾಮಕದಳದವರು ಸ್ಥಳಕ್ಕೆ ಭೇಟಿ ನೀಡಿದ್ದರು. ಸಿದ್ದಾಪುರ ಜಿ.ಪಂ ಸದಸ್ಯ ರೋಹಿತ್ ಶೆಟ್ಟಿ ಮೊದಲಾದವರು ಇದ್ದರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ನಿಶಾ ಜೇಮ್ಸ್, ಪ್ರಕರಣದ ಬಗ್ಗೆ ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕುತ್ತಿದ್ದು ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಇದೊಂದು ಗಂಭೀರ ಪ್ರಕರಣವಾದ್ದರಿಂದ ಕುಂದಾಪುರ ಡಿವೈಎಸ್ಪಿಗೆ ತನಿಖಾಧಿಕಾರಿಯಾಗಿ ಜವಬ್ದಾರಿ ನೀಡಲಾಗುತ್ತದೆ. ಉಡುಪಿ ಡಿಸಿಐಬಿ ಪೊಲೀಸರು ಹಾಗೂ ಕುಂದಾಪುರ ಸಿಪಿಐ ನೇತೃತ್ವದ ತಂಡ ವಿಚಾರಣೆ ಕೈಗೆತ್ತಿಕೊಂಡಿದೆ. ಮಗುವಿನ ತಾಯಿ ನೀಡಿದ ದೂರಿನಂತೆ ಅಪಹರಣ ಪ್ರಕರಣ ದಾಖಲಿಸಿ ಈ ನಿಟ್ಟಿನಲ್ಲಿಯೂ ತನಿಖೆ ಸಾಗಲಿದೆ. ಮಗುವಿನ ಪತ್ತೆ ಬಗ್ಗೆ ಸಾರ್ವಜನಿಕರ ಸಹಕಾರವೂ ಬೇಕಿದ್ದು ಯಾವುದೇ ಸುಳಿವಿದ್ದರೂ ಪೊಲೀಸ್ ಇಲಾಖೆ ಗಮನಕ್ಕೆ ತರಬಹುದು ಎಂದಿದ್ದಾರೆ.












