ಕಿಚ್ಚ ಸುದೀಪ್ ರಾಜಕೀಯ ರಂಗ ಪ್ರವೇಶವಿಲ್ಲ; ಪ್ರಚಾರ ಮಾತ್ರ: ಬೊಮ್ಮಾಯಿ-ಸುದೀಪ್ ಜಂಟಿ ಸುದ್ದಿಗೋಷ್ಠಿ

ಬೆಂಗಳೂರು: ಬಹುಭಾಷಾ ನಟ ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆ ಎನ್ನುವ ಊಹಾಪೋಹಗಳಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಸ್ವತಃ ಸುದೀಪ್ ಅವರೇ ತೆರೆ ಎಳೆದಿದ್ದಾರೆ.

ಬುಧವಾರದಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯವರನ್ನು ಮಾಮಾ ಅಂತ ಕರೆಯುತ್ತೇನೆ. ಚಿತ್ರರಂಗಕ್ಕೆ ಬಂದಾಗ ನನಗೆ ಗಾಡ್ ಫಾದರ್ ಇರಲಿಲ್ಲ. ಆಗ ನನ್ನ ಜೊತೆಯಲ್ಲಿ ಕೆಲವೇ ಕೆಲವರು ನಿಂತಿದ್ದರು. ಅಂಥಹವರಲ್ಲಿ ನನ್ನ ಮಾಮ ಸಿಎಂ ಬೊಮ್ಮಾಯಿ ಒಬ್ಬರು. ಅವರು ಕೂಡಾ ಆಗ್ಅ ತಾನೇ ರಾಜಕೀಯಕ್ಕೆ ಬಂದಿದರು. ನಾನು ಅವರ ಪರವಾಗಿ ನಿಲ್ಲುತ್ತೇನೆ ಹೊರತು ರಾಜಕೀಯ ಪ್ರವೇಶದ ಇಚ್ಛೆ ಇಲ್ಲ. ನನ್ನ ಜೊತೆ ನಿಂತ ವ್ಯಕ್ತಿ ಪರ ಬೆಂಬಲ ನೀಡುವುದಕ್ಕೆ ಬಂದಿದ್ದೇನೆ ಎಂದರು. ಎಂದು ನಟ ಸುದೀಪ್​ ಹೇಳಿದರು.

Image

ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದು ಸಾಕಷ್ಟಿದೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡಲ್ಲ​ ಎಂದು ನಟ ಸುದೀಪ್​ ಹೇಳಿದರು.

ಮೊದಲು ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ನನ್ನ ಜೊತೆಗೆ ಪಕ್ಷದ ಪರ ನಟ ಸುದೀಪ್ ಪ್ರಚಾರ ಮಾಡುತ್ತಾರೆ. ಸುದೀಪ್​ ಚಲನಚಿತ್ರ ರಂಗದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ನಟ ಸುದೀಪ್ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಆದರೆ ನಟ ಸುದೀಪ್​ ನನಗೆ ಬೆಂಬಲ ಕೊಡುತ್ತಿದ್ದಾರೆ. ಪಕ್ಷಕ್ಕೆ ಸೇರದೆ ಇದ್ದರೂ ನಿನ್ನ ಪ್ರಚಾರದ ಅಗತ್ಯವಿದೆ ಎಂದಿದ್ದೇನೆ ಎಂದು ಹೇಳಿದರು.

ಹೆಸರಾಂತ ಚಿತ್ರನಟ ಸುದೀಪ್ ಅವರು ನನ್ನ ಮೇಲಿನ ಪ್ರೀತಿ, ವಿಶ್ವಾಸದಿಂದ, ನನಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿರುವುದನ್ನು ನಾನು ಸ್ವಾಗತಿಸುತ್ತೇನೆ, ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರನ್ನು ನಮ್ಮ ಪಕ್ಷದ ಪರ ಪ್ರಚಾರಕ್ಕೆ ಸಂಪೂರ್ಣವಾಗಿ ಬಳಸಿಕೊಂಡು, ಅವರ ಶಕ್ತಿಯನ್ನು ಸದ್ಭಳಕೆ ಮಾಡಿಕೊಳ್ಳುತ್ತೇವೆ. ಸುದೀಪ್ ಅವರ ತಂದೆ-ತಾಯಿಯವರಿಗೆ ಸಹ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ ಎಂದರು.

ಕಿಚ್ಚ ಸುದೀಪ್ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನುವ ಊಹಾಪೋಹದ ಸುದ್ದಿಗಳಿಗೆ ಅವರ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಕಿಚ್ಚ ಯಾವುದೇ ಕಾರಣಕ್ಕೂ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬಾರದು, ಅವರು ಚಿತ್ರರಂಗದಲ್ಲೇ ಇದ್ದು ಅಭಿಮಾನಿಗಳನ್ನು ರಂಜಿಸಬೇಕು ಎಂದು ಅಭಿಪ್ರಾಯಗಳನ್ನು ಹಂಚಿಕೊಂಡು ಟ್ವಿಟರ್ ನಲ್ಲಿ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ.