ತಡಿಯಾಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ 36 ವರ್ಷದ ಶರಣ್ಯ ಕೊನೆಗೂ ಪತ್ತೆಯಾಗಿದ್ದಾರೆ. ಇವರು ಕಾಡಿನಲ್ಲಿ ಮೂರು ದಿನಗಳು ಒಬ್ಬಂಟಿಯಾಗಿ ಕಳೆದಿದ್ದರು, ವೈದ್ಯರು ಅವರ ಆರೋಗ್ಯ ಪರಿಶೀಲನೆ ನಡೆಸಿದ್ದಾರೆ. ಶರಣ್ಯ, ಐಟಿ ಉದ್ಯೋಗಿಯಾಗಿದ್ದು, ಏಪ್ರಿಲ್ 2ರಂದು ಕೊಡಗು ಜಿಲ್ಲೆಯ ಕಕ್ಕಬ್ಬೆ ಗ್ರಾಮದಲ್ಲಿ ಖಾಸಗಿ ಹೋಂಸ್ಟೇಯಲ್ಲಿ ತಂಗಿ, ತಡಿಯಾಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ಹೊರಟಿದ್ದರು. ಮಧ್ಯಾಹ್ನ ಎರಡು ಗಂಟೆಗೆ “ದಾರಿ ತಪ್ಪಿದ್ದೇನೆ” ಎಂದು ಕರೆ ಮಾಡಿ ಸಂಪರ್ಕ ಕಟ್ ಆಗಿತ್ತು.
ಅರಣ್ಯ ಇಲಾಖೆಯಿಂದ ಶೋಧಕಾರ್ಯ
ಶರಣ್ಯ ಪತ್ತೆಗೆ ಅರಣ್ಯ ಇಲಾಖೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿತ್ತು. ಸುಮಾರು 40 ಸಿಬ್ಬಂದಿಯ ತಂಡ, ಡ್ರೋನ್ ಸಹಾಯದಿಂದ ಮೂರು ದಿನಗಳ ಶೋಧ ನಡೆಸಿದ್ದು, ಒಟ್ಟು 9 ತಂಡಗಳಿಂದ ಕಾರ್ಯಾಚರಣೆ ನಡೆದಿತ್ತು. ಪೊಲೀಸ್, ನಕ್ಸಲ್ ನಿಗ್ರಹದಳ, ಶ್ವಾನದಳ ಹಾಗೂ ಅರಣ್ಯ ಸಿಬ್ಬಂದಿಗಳು ಶರಣ್ಯ ಹುಡುಕಾಟದಲ್ಲಿ ಭಾಗವಹಿಸಿದ್ದರು. ಭಾನುವಾರ ಸಂಜೆ, ಬೆಟ್ಟದಲ್ಲಿ ಶೋಧ ಕಾರ್ಯ ನಡೆಸಿದ ವೇಳೆ, ಶರಣ್ಯ ಪತ್ತೆಯಾಗಿದ್ದು, ವೈದ್ಯರ ಪರಿಶೀಲನೆ ನಂತರ ಆರೋಗ್ಯ ಸುರಕ್ಷಿತವಾಗಿರುವುದು ದೃಢಪಟ್ಟಿದೆ.
4 ದಿನಗಳ ಸತತ ಹುಡುಕಾಟದ ಬಳಿಕ ಶರಣ್ಯ ಪತ್ತೆಯಾಗಿದ್ದು, ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರಿಗೆ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ, ಆಧುನಿಕ ಶೋಧ ಉಪಕರಣಗಳನ್ನು ಒದಗಿಸಿರುವ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸೂಚಿಸಲಾಗಿದೆ.

















