ಶಂಕಿತ ನಕ್ಸಲ್ ಬಂಧನ: ಕೇರಳ ಪೊಲೀಸರಿಂದ ಕಾರ್ಯಾಚರಣೆ

ಚಿಕ್ಕಮಗಳೂರು/ಉಡುಪಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ಶಂಕಿತ ನಕ್ಸಲ್‌ ಸುರೇಶ್ ಅಲಿಯಾಸ್‌ ಪ್ರದೀಪ್‌ನನ್ನು ಕೇರಳದ ಕಣ್ಣೂರಿನ ಕಂಚಿರಕೊಲ್ಲಿ ಅರಣ್ಯದಲ್ಲಿ ಕೇರಳ ಪೊಲೀಸರು ಬಂಧಿಸಿದ್ದಾರೆ.

ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್‌ಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಮಗಳೂರು, ಉಡುಪಿ ಸೇರಿ ರಾಜ್ಯದ ಹಲವೆಡೆ ಸುರೇಶ್ ವಿರುದ್ಧ 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆರೋಪಿ ಚೇತರಿಸಿಕೊಂಡ ಬಳಿಕ ಬಾಡಿ ವಾರೆಂಟ್‌ ಪಡೆದು ರಾಜ್ಯಕ್ಕೆ ಕರೆತಂದು ವಿಚಾರಣೆ ನಡೆಸಲಾಗುವುದು ಎಂದು ನಕ್ಸಲ್ ನಿಗ್ರಹ ದಳದ ಎಸ್‌ಪಿ ಜಿತೇಂದ್ರ ಕುಮಾರ್ ದಯಂ ಮಾಹಿತಿ ನೀಡಿದ್ದಾರೆ.

‘ಸುರೇಶ್‌ ಬಂಧನದ ಬಗ್ಗೆ ಕೇರಳ ಪೊಲೀಸರಿಂದ ಅಧಿಕೃತ ಮಾಹಿತಿ ಬಂದಿಲ್ಲ. ಬಂಧನವಾಗಿರುವ ಸುದ್ದಿಯಷ್ಟೇ ತಿಳಿದಿದೆ. ಆತನ ವಿರುದ್ಧ ಯಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ. ಕೇರಳ ಪೊಲೀಸರಿಂದ ಅಧಿಕೃತ ಮಾಹಿತಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಮಾಧ್ಯಮಕ್ಕೆ ತಿಳಿಸಿದ್ದಾರೆ.‌