ಕೇರಳ ಹೈಕೋರ್ಟ್ ನಿಂದ ಪಿಎಫ್‌ಐ ಗೆ ತಪರಾಕಿ: ಬಂದ್ ವೇಳೆಯ ಹಾನಿಗಾಗಿ 5.20 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶ

ಕೊಚ್ಚಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕರ ಬಂಧನವನ್ನು ವಿರೋಧಿಸಿ ಸೆಪ್ಟೆಂಬರ್ 23 ರಂದು ಕರೆ ನೀಡಿದ್ದ ಬಂದ್ ವೇಳೆ ಉಂಟಾದ ಹಾನಿಗೆ ಪರಿಹಾರವಾಗಿ 5.20 ಕೋಟಿ ರೂಪಾಯಿಗಳನ್ನು ಠೇವಣಿ ಮಾಡುವಂತೆ ಕೇರಳ ಹೈಕೋರ್ಟ್ ಗುರುವಾರ ಆದೇಶಿಸಿದೆ. ಈ ಮೊತ್ತವನ್ನು 2 ವಾರಗಳಲ್ಲಿ ಠೇವಣಿ ಮಾಡುವಂತೆ ಕೋರ್ಟ್ ತಾಕೀತು ಮಾಡಿದೆ.

ವಿಭಾಗೀಯ ಪೀಠ ನ್ಯಾಯಮೂರ್ತಿಗಳಾದ ಎ.ಕೆ. ಜಯಶಂಕರ ನಂಬಿಯಾರ್ ಮತ್ತು ಸಿ.ಪಿ.ಮೊಹಮ್ಮದ್ ನಿಯಾಸ್ ಅವರು ಪಿಎಫ್‌ಐ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಂಡಿದ್ದಾರೆ ಮತ್ತು ಪರಿಹಾರವಿಲ್ಲದೆ ಜಾಮೀನು ನೀಡದಂತೆ ರಾಜ್ಯದ ಎಲ್ಲಾ ಕೆಳ ನ್ಯಾಯಾಲಯಗಳಿಗೆ ಸೂಚಿಸಿದ್ದಾರೆ.

ಹಾನಿಯನ್ನು ಪಾವತಿಸಲು ವಿಫಲವಾದರೆ ವಿನಾಶದಲ್ಲಿ ತೊಡಗಿರುವ ಎಲ್ಲರ ವೈಯಕ್ತಿಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗಳನ್ನು ತೆಗೆದುಕೊಳ್ಳಬೇಕು ಎಂದು ಕೋರ್ಟ್ ಸೂಚಿಸಿದೆ. ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತಾರ್ ಅವರನ್ನು ಎಲ್ಲಾ ಪ್ರಕರಣಗಳಲ್ಲಿ ಹೆಚ್ಚುವರಿ ಆರೋಪಿಯನ್ನಾಗಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನಷ್ಟ ಅನುಭವಿಸಿದವರಿಗೆ ಪರಿಹಾರವನ್ನು ಪಾವತಿಸುವ ಎಲ್ಲಾ ವಿಷಯಗಳ ಬಗ್ಗೆ ವ್ಯವಹರಿಸುವ ಪರಿಹಾರ ಆಯೋಗವನ್ನು ಸ್ಥಾಪಿಸಲು ನ್ಯಾಯಾಲಯವು ಸೂಚಿಸಿದೆ.

487 ಪ್ರಕರಣಗಳನ್ನು ದಾಖಲಿಸಲಾಗಿದ್ದು, 1,992 ಜನರನ್ನು ಬಂಧಿಸಲಾಗಿದೆ ಮತ್ತು 687 ಜನರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ ಎಂದು  ವರದಿಯಾಗಿದೆ.