ಕೇರಳ ಬಿಜೆಪಿ ಒಬಿಸಿ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣ: ಪಿಎಫ್‌ಐ ನಂಟಿದ್ದ15 ಆರೋಪಿಗಳಿಗೆ ಮರಣದಂಡನೆ ವಿಧಿಸಿದ ಕೇರಳ ಹೈಕೋರ್ಟ್

ತಿರುವನಂತಪುರ: ಅಲಪ್ಪುಳ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಒಬಿಸಿ ವಿಭಾಗದ ನಾಯಕ ರಂಜಿತ್ ಶ್ರೀನಿವಾಸನ್ ಅವರ ಹತ್ಯೆಗೆ ಸಂಬಂಧಿಸಿದಂತೆ ಈಗ ನಿಷೇಧಿತ ಇಸ್ಲಾಮಿಸ್ಟ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೊಂದಿಗೆ ಸಂಬಂಧ ಹೊಂದಿದ್ದ 15 ಆರೋಪಿಗಳಿಗೆ ಕೇರಳ ನ್ಯಾಯಾಲಯ ಮಂಗಳವಾರ ಮರಣದಂಡನೆ ವಿಧಿಸಿದೆ.

ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಿ ಶ್ರೀದೇವಿ ಶಿಕ್ಷೆಯನ್ನು ಪ್ರಕಟಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಷನ್ ಕೋರಿತ್ತು. ಅಪರಾಧಿಗಳು “ತರಬೇತಿ ಪಡೆದ ಕೊಲೆಗಾರ ಸ್ಕ್ವಾಡ್” ಎಂದು ಅದು ವಾದಿಸಿತ್ತು. ತನ್ನ ತಾಯಿ, ಶಿಶು ಮತ್ತು ಹೆಂಡತಿಯ ಮುಂದೆ ಕೊಲ್ಲಲ್ಪಟ್ಟಿರುವ ರಂಜಿತ್ ಅವರ ಕ್ರೂರ ಮತ್ತು ಪೈಶಾಚಿಕ ರೀತಿಯ ಹತ್ಯೆ ಪ್ರಕರಣ ಅದನ್ನು “ಅಪರೂಪದ ಅಪರೂಪದ” ಅಪರಾಧಗಳ ವ್ಯಾಪ್ತಿಯೊಳಗೆ ತರುತ್ತದೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ.

ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿದ್ದ ರಂಜಿತ್ ಶ್ರೀನಿವಾಸನ್ ಅವರನ್ನು ಡಿಸೆಂಬರ್ 19, 2021 ರಂದು ಅವರ ಮನೆಯಲ್ಲೇ ಅವರ ಕುಟುಂಬದವರ ಎದುರೇ ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದು, ಪಿಎಫ್‌ಐ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ಗೆ ಸಂಬಂಧಿಸಿದ ಕಾರ್ಯಕರ್ತರು ಇದರಲ್ಲಿ ಶಾಮೀಲಾಗಿದ್ದರು ಎಂದು ವರದಿ ಹೇಳಿದೆ.

ಪ್ರಕರಣದ ಆರೋಪಿಗಳಾಗಿರುವ 15 ಜನರಲ್ಲಿ ಒಂದರಿಂದ ಎಂಟರವರೆಗಿನ ಮಂದಿ ನೇರವಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜನವರಿ 20 ರಂದು ನ್ಯಾಯಾಲಯವು ಕಂಡುಹಿಡಿದಿದೆ. ನಾಲ್ವರು (ಆರೋಪಿ ಸಂಖ್ಯೆ ಒಂಬತ್ತರಿಂದ 12) ಕೊಲೆಗೆ ಬೇಕಾದ ಮಾರಕ ಆಯುಧಗಳನ್ನು ಸ್ಥಳಕ್ಕೆ ಸಾಗಿಸಿದ್ದರು. ಶ್ರೀನಿವಾಸನ್ ಪರಾರಿಯಾಗುವುದನ್ನು ತಡೆಯುವುದು ಮತ್ತು ಅವರ ಕಿರುಚಾಟವನ್ನು ಕೇಳಿದ ನಂತರ ಯಾರಾದರೂ ಮನೆಗೆ ಪ್ರವೇಶಿಸುವುದನ್ನು ತಡೆಯುವುದು ಅವರ ಉದ್ದೇಶವಾಗಿತ್ತು ಎಂದು ಕೋರ್ಟ್ ಕಂಡುಕೊಂಡಿದೆ.

ಐಪಿಸಿ ಸೆಕ್ಷನ್ 149 ರ ಅಡಿಯಲ್ಲಿ ಕೊಲೆಯ ಅಪರಾಧಕ್ಕೆ ಅವರೆಲ್ಲರೂ ಸಮಾನ ಹೊಣೆಗಾರರಾಗಿರುತ್ತಾರೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಶ್ರೀನಿವಾಸನ್ ಹತ್ಯೆಗೆ ಸಂಚು ರೂಪಿಸಿದ್ದ ಇತರ ಮೂವರನ್ನು (ಆರೋಪಿ ಸಂಖ್ಯೆ 13 ರಿಂದ 15) ಕೊಲೆ ಮಾಡಿದ ಆರೋಪದಲ್ಲಿ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ ಎಂದು ಎಸ್‌ಪಿಪಿ ತಿಳಿಸಿದೆ.