ಏರ್ ಇಂಡಿಯಾ ವಿಮಾನ ಪತನ: ಸಾವಿನ ಸಂಖ್ಯೆ 8ಕ್ಕೆ ಏರಿಕೆ, 45 ಮಂದಿಯ ಸ್ಥಿತಿ ಗಂಭೀರ

ಕಲ್ಲಿಕೋಟೆ: ಇಲ್ಲಿನ ಕೋಯಿಕೋಡ್ ನ ಕರಿಪುರ್ ವಿಮಾನ ನಿಲ್ದಾಣದಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪ್ರಯಾಣಿಕರ ಅಧಿಕೃತ ಮಾಹಿತಿ ಬಿಡುಗಡೆಗೊಳಿಸಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯದ ಪ್ರಕಾರ ಪತನಗೊಂಡ ವಿಮಾನದಲ್ಲಿ 10 ಚಿಕ್ಕ ಮಕ್ಕಳು, ಇಬ್ಬರು ಪೈಲಟ್ ಹಾಗೂ ಐದು ಮಂದಿ ಸಿಬ್ಬಂದಿ ಇದ್ದರು. ಹಾಗೆ ಕರ್ನಾಟಕದ ವಿದ್ಯಾರ್ಥಿನಿಯೊಬ್ಬಳು ಈ ವಿಮಾನದಲ್ಲಿ ಇದ್ದಳು ಎಂದು ತಿಳಿದುಬಂದಿದೆ.
ಕೋವಿಡ್ ನಿಂದಾಗಿ ಸಂಕಷ್ಟದಲ್ಲಿದ್ದ ಜನರನ್ನು ಭಾರತ್ ಮಿಷನ್ ನಡಿಯಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಕ್ಯಾಲಿಕಟ್ ಗೆ ಕರೆತರಲಾಗುತಿತ್ತು. ಆದರೆ ಕೋಯಿಕೋಡ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇ ಯಿಂದ ಜಾರಿದ ಪರಿಣಾಮ ದುರ್ಘಟನೆ ಸಂಭವಿಸಿದೆ. ಹವಾಮಾನ ವೈಪರೀತ್ಯದಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಪೈಲಟ್ ಸಹಿತ 8 ಮಂದಿಯ ಸಾವು:
ಸದ್ಯದ ಮಾಹಿತಿ ಪ್ರಕಾರ ವಿಮಾನದ ಪೈಲಟ್ ಸಹಿತ 8 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. 45 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿಮಾನದಲ್ಲಿ ಆರು ಮಂದಿ ಸಿಬ್ಬಂದಿ, ಹತ್ತು ಮಕ್ಕಳು ಸಹಿತ 192 ಮಂದಿ ಪ್ರಯಾಣಿಸುತ್ತಿದ್ದರು. ಎನ್ ಡಿಆರ್ ಎಫ್ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಯುತ್ತಿದೆ.