ಕಟ್‌ಬೆಲ್ತೂರು ಗ್ರಾಪಂ ಸದಸ್ಯನಿಗೆ ವ್ಯಕ್ತಿಯಿಂದ ಬೆದರಿಕೆ; ದೂರು ದಾಖಲು

ಕುಂದಾಪುರ: ಗ್ರಾಮ ಸಭೆಯನ್ನು‌ ಮುಂದೂಡಿದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವ ಗ್ರಾಪಂ ಸದಸ್ಯನಿಗೆ ಬೆದರಿಕೆ ಹಾಕಿ‌ ಹಲ್ಲೆಗೆ ಯತ್ನಿಸಿದ ಘಟನೆ ಕಟ್‌ಬೆಲ್ತೂರು ಗ್ರಾಪಂ ನಲ್ಲಿ‌ ನಡೆದಿದೆ.

ಜ.14ರಂದು ಕಟ್‌ಬೆಲ್ತೂರು ಗ್ರಾಪಂನ 2021-22 ನೇ ಸಾಲಿನ ಪ್ರಥಮ ಗ್ರಾಮ ಸಭೆ ನಡೆಯಬೇಕಿತ್ತು. ಆದರೆ, 2 ಸದಸ್ಯರು ಗೈರು ಹಾಜರಾದ ಕಾರಣ ಬೆಳಿಗ್ಗೆ 11.30ರ ವೇಳೆಗೆ ಗ್ರಾಮಸ್ಥರು ಸಭೆಯನ್ನು ಮುಂದೂಡುವ ಬಗ್ಗೆ ಸಲಹೆ ನೀಡದ ಮೇರೆಗೆ ಸಭೆಯನ್ನು ಜ.19ಕ್ಕೆ ಮುಂದೂಡಿಕೆ ಮಾಡಲಾಯಿತು. ಈ ವೇಳೆ ಹೊರಗಿನಿಂದ ಬಂದ ಆರೋಪಿ ಮಹೇಶ್ ಖಾರ್ವಿ ಎಂಬಾತ ಅಕ್ರಮವಾಗಿ ಗ್ರಾಪಂ ಒಳಗೆ ಅಕ್ರಮ ಪ್ರವೇಶ ಮಾಡಿ ಗ್ರಾಮ ಸಭೆಯನ್ನು ಯಾಕೆ ಮುಂದೂಡಿದ್ದು ಎಂದು ಸಭೆಯಲ್ಲಿದ್ದ ಗ್ರಾಪಂ ಸದಸ್ಯ ಅಶೋಕ ಬಳೆಗಾರ ಅವರನ್ನು ತಡೆದು ನಿಲ್ಲಿಸಿ, ಅವರ ಕಾಲರ್‌ಪಟ್ಟಿ ಹಿಡಿದು ದಮ್ಕಿ ಹಾಕಿ ಹಲ್ಲೆ ಮಾಡಲು ಯತ್ನಿಸಿದ್ದಾನೆ.

ಗ್ರಾಮ ಸಭೆಯನ್ನು ಆರಂಭಿಸ ಇಲ್ಲದಿದ್ದರೆ ನಿಮ್ಮನ್ನು  ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಅಶೋಕ್ ಬಳೆಗಾರ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.