ಶ್ರೀ ಕ್ಷೇತ್ರ ಕಟೀಲು ಬ್ರಹ್ಮಕಲಶೋತ್ಸವದ ಸಿದ್ಧತೆ ಭರದಿಂದ ಸಾಗ್ತಿದೆ: ಉಮಾನಾಥ ಕೋಟ್ಯಾನ್

ಮಂಗಳೂರು: ಶ್ರೀಕ್ಷೇತ್ರ ಕಟೀಲು ಬ್ರಹ್ಮಕಲಶೋತ್ಸವದ ಸಿದ್ಧತೆ ವೇಗದಿಂದ ಸಾಗುತ್ತಿದೆ ಈಗಾಗಲೇ ಧಾರ್ಮಿಕ, ಸಾಂಸ್ಕೃತಿಕ, ಭಜನಾ ಮತ್ತು ಸಭಾ ಕಾರ್ಯಕ್ರಮಗಳ ಸಿದ್ಧತೆಯಾಗಿದೆ. ಜ.22ರಿಂದ ಫೆ.3 ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.

ಅವರು ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಜ.24ರಂದು ಸುವರ್ಣ ಧ್ವಜಪ್ರತಿಷ್ಠೆ, 3೦ರಂದು ಬ್ರಹ್ಮಕಲಶ, ಫೆ.೧ರಂದು ನಾಗಮಂಡಲ, ೨ರಂದು ಕೋಟಿಜಪ ಯಜ್ಞ ಹಾಗೂ ೩ರಂದು ಸಹಸ್ರ ಚಂಡಿಕಾಯಾಗ ನಡೆಯಲಿದೆ. ಹದಿಮೂರು ದಿನಗಳ ಕಾಲ ನಡೆಯುವ ಈ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಪ್ರಧಾನ ಸಮಿತಿಯನ್ನೊಳಗೊಂಡ 3೦ ಸಮಿತಿಗಳ ರಚನೆಗೊಂಡಿದ್ದು ಎಲ್ಲಾ ಸಮಿತಿಗಳು ಸಕ್ರಿಯವಾಗಿ ತೊಡಗಿಕೊಂಡಿವೆ. ಕಳೆದ ಒಂದು ತಿಂಗಳಿಂದ ಕರಾವಳಿ ಜಿಲ್ಲೆಗಳ ಬೇರೆಬೇರೆ ಭಾಗದಿಂದ ಸಾವಿರಾರು ಸ್ವಯಂಸೇವಕರು ತಂಡತಂಡವಾಗಿ ಆಗಮಿಸಿ ಕರಸೇವೆಯಲ್ಲಿ ಮಗ್ನರಾಗಿದ್ದಾರೆ ಎಂದು ತಿಳಿಸಿದರು,

25 ಲಕ್ಷ ಭಕ್ತರ ನಿರೀಕ್ಷೆ:
ಈಗಾಗಲೇ ಉತ್ಸವಕ್ಕೆ ಬೇಕಾದ ಸ್ಥಳ ಸಿದ್ದತೆ ಸೇರಿದಂತೆ ಸಕಲ ಸಿದ್ದತೆಯನ್ನೂ ವ್ಯವಸ್ಥಿತವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದ್ದು ಕೆಲಸಗಳು ಚಾಲ್ತಿಯಲ್ಲಿದೆ. ಉತ್ಸವ ಸಂದರ್ಭದಲ್ಲಿ ಸುಮಾರು ೨೫ ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಈ ಕುರಿತು ವ್ಯವಸ್ಯೆಯನ್ನು ಮಾಡಿಕೊಳ್ಳಲಾಗಿದೆ. ಸುಮಾರು ರೂ.7 ಕೋಟಿ ಇದಕ್ಕಾಗಿ ಖರ್ಚು
ತಗುಲಬಹುದೆಂದು ಅಂದಾಜಿಸಲಾಘಿದೆ ಎಂದರು.

ಬ್ರಹ್ಮಕಲಶದ ಸಂದರ್ಭದಲ್ಲಿ ನಡೆಯಲಿರುವ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ದೇವಳದ ಬಸ್ಸು ನಿಲ್ದಾಣದಲ್ಲಿ ವಿಶಾಲವಾದ ವೇದಿಕೆ ಸಿದ್ಧವಾಗಿದೆ. ಆಸಕ್ತರು ಕುಳಿತು ನೋಡುವುದಕ್ಕಾಗಿ ವಿಶಾಲವಾದ ಸಭಾಂಗಣ ಸಿದ್ಧವಾಗಿದೆ. ಸುಮಾರು ಎರಡೂವರೆ ಸಾವಿರ ಜನರು ಏಕಕಾಲದಲ್ಲಿ ಕುಳಿತು ನೋಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಟೀಲಿನ ಅಜಾರಿನಿಂದ ಗಿಡಿಗೆರೆಯವರೆಗೆ, ಮಾಂಜದ ಪಾರ್ಕಿಂಗ್ ಜಾಗದಲ್ಲಿ ವಿವಿಧ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಪದವಿ ಕಾಲೇಜಿನ ಕ್ರೀಡಾಂಗಣದಲ್ಲಿ
ಮನೋರಂಜನೆಗೆ ಬೇಕಾದ ತೊಟ್ಟಿಲು, ಜೋಕಾಲಿ, ರೈಲು… ಇತ್ಯಾದಿ ಆಟಗಳಿಗೆ ವ್ಯವಸ್ಥೆ
ಮಾಡಲಾಗಿದೆ ಎಂದರು.

ರಸ್ತೆಗಳ ಅಗಲೀಕರಣ:

ಕಿನ್ನಿಗೋಳಿ-ಉಲ್ಲಂಜೆ-ಕಟೀಲು, ಬಜಪೆ-ಕಟೀಲು, ಮೂರುಕಾವೇರಿ-ಕಟೀಲು ಈ ಮಾರ್ಗವನ್ನು ಸುಮಾರು ೨೫ ಕೋಟಿ ವೆಚ್ಚದಲ್ಲಿ ಅಗಲ ಮಾಡುತ್ತಿದ್ದು ಈಗಾಗಲೇ ಹುಣಸೇಕಟ್ಟೆಯಿಂದ ಕಟೀಲುವರೆಗಿನ ಕೆಲಸ ಮುಕ್ತಾಯ ಹಂತದಲ್ಲಿದೆ. ತಾತ್ಕಾಲಿಕ ಬೈಪಾಸ್ ರಸ್ತೆಗಳನ್ನೂ ನಿರ್ಮಿಸಲಾಗಿದೆ. ಕಟೀಲಿನ ಸಂಪರ್ಕ
ರಸ್ತೆಗಳನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ಮೂಲಸ್ಥಾನವಾದ ಕುದುರುವಿನಲ್ಲಿ ನಾಗಮಂಡಲ, ಕೋಟಿಜಪಯಜ್ಞ, ಸಹಸ್ರಚಂಡಿಕಾಯಾಗ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಗಮಂಡಲ ಮಂಟಪ, ಯಾಗಮಂಟಪ ಸಿದ್ಧವಾಗಿದೆ. ಕುದುರುವಿನಲ್ಲಿ ಯಾವುದೇ ಯಂತ್ರಗಳನ್ನು ಬಳಸದೇ ಶ್ರಮದಾನದಿಂದ ಮಣ್ಣುಹಾಕಿ ಸಮದಟ್ಟು ಮಾಡುವ ಕೆಲಸವಾಗಿದೆ ಎಂದವರು ತಿಳಿಸಿದರು.
ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು, ವಾಸುದೇವ ಆಸ್ರಣ್ಣ, ಅನಂತ ಪದ್ಮನಾಭ ಅಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಡಾ.ಆಶಾಜ್ಯೋತಿ ರೈ ಉಪಸ್ಥಿತರಿದ್ದರು.