ದೇಶದ ಇತಿಹಾಸದಲ್ಲಿ ಅತಿ ದೊಡ್ಡ ಉಗ್ರರ ಕೃತ್ಯ

ಶ್ರೀನಗರ: ಸರ್ಜಿಕಲ್ ಸ್ಟ್ರೈಕ್ ನಡೆದರೂ ಪಾಕಿಸ್ತಾನ ಪ್ರಾಯೋಜಿತ ಉಗ್ರರಿಗೆ ಬುದ್ಧಿ ಬಂದಿಲ್ಲ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಬಸ್ಸಿನಲ್ಲಿದ್ದ 42 ಮಂದಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದಾರೆ. ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ದೇಶದ ಸೇನಾ ಇತಿಹಾಸದಲ್ಲಿ ಅತಿ ದೊಡ್ಡ ಉಗ್ರರ ದಾಳಿ ಇದಾಗಿದೆ. ದಾಳಿಯಲ್ಲಿ 45 ಮಂದಿ ಗಾಯಗೊಂಡಿದ್ದು, 18 ಯೋಧರ ಸ್ಥಿತಿ ಗಂಭೀರವಾಗಿದೆ. ಗೋರಿಪೋರ ಪ್ರದೇಶದಲ್ಲಿ ಉಗ್ರರು ಸುಧಾರಿತ ಸ್ಫೋಟಕ ಬಳಸಿ ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಜೈಶ್ -ಎ-ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಕೃತ್ಯ ನಡೆದಿದ್ದು ಹೇಗೆ?
ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್‌ಪಿಎಫ್‌ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 42 ಮಂದಿ ಸೈನಿಕರು ವೀರ ಮರಣವನ್ನು ಅಪ್ಪಿದ್ದಾರೆ.

ಸ್ಫೋಟದ ತೀವ್ರತೆ ಎಷ್ಟು ಇತ್ತು ಎಂದರೆ ಸೈನಿಕರ ದೇಹದ ಭಾಗಗಳು ಹೈವೇಯ 100 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಸ್ಫೋಟಕಗೊಂಡ ಬಳಿಕ ಉಳಿದ ಬಸ್ಸುಗಳು ನಿಂತ ಮೇಲೆ ಅವುಗಳ ಮೇಲೂ ಉಗ್ರರು ದಾಳಿ ನಡೆಸಿದ್ದಾರೆ. ಪೂರ್ವನಿಯೋಜಿತ ಕೃತ್ಯವಾಗಿದ್ದರಿಂದ ಸೈನಿಕರ ವಾಹನವನ್ನು ಉಗ್ರರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಆತ್ಮಾಹುತಿ ದಾಳಿಕೋರ ಬಸ್ಸಿಗೆ ಕಾರನ್ನು ಡಿಕ್ಕಿ ಹೊಡೆದ ಬಳಿಕ ಉಳಿದ ಬಸ್ಸುಗಳು ನಿಂತ ಕೂಡಲೇ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಹೀಗಾಗಿ ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಉಗ್ರರ ಈ ದಾಳಿಗೆ ಸಾಕ್ಷ್ಯ ಎಂಬಂತೆ ಬಸ್ಸಿನ ಹಿಂಭಾಗದಲ್ಲಿ ಬುಲೆಟ್ ಗುರುತು ಬಿದ್ದಿದೆ. ವಿಪರೀತ ಮಂಜು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಶ್ರೀನಗರ ಹೆದ್ದಾರಿ ಕಳೆದ ಎರಡು ದಿನಗಳಿಂದ ಮುಚ್ಚಲ್ಪಟ್ಟಿತ್ತು.

ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ 2016ರ ಸೆಪ್ಟೆಂಬರ್ 18ರಂದು ನಾಲ್ವರು ಉಗ್ರರು ದಾಳಿ ನಡೆಸಿ 18 ಮಂದಿ ಯೋಧರನ್ನು ಹತ್ಯೆ ಮಾಡಿದ್ದರು. ಭಾರತೀಯ ಸೇನೆ ಸಮವಸ್ತ್ರ ಧರಿಸಿ ಅಕ್ರಮವಾಗಿ ಒಳ ನುಗ್ಗಿದ್ದ ಈ ಪಾಪಿಗಳು ಯೋಧರು ಮಲಗಿದ್ದಾಗ ದಾಳಿ ನಡೆಸಿ ಕೃತ್ಯ ಎಸಗಿದ್ದರು. ಇಲ್ಲಿಯವರೆಗೆ ದೇಶದ ಇತಿಹಾಸಲ್ಲಿ ಅತಿ ದೊಡ್ಡ ದಾಳಿ ಎಂಬ ಕುಖ್ಯಾತಿ ಗಳಿಸಿತ್ತು. ಈಗ ಇದಕ್ಕಿಂತಲೂ ಅತಿ ದೊಡ್ಡ ದಾಳಿ ನಡೆದಿದ್ದು ಉಗ್ರರ ಪಾಪಿ ಕೃತ್ಯಕ್ಕೆ ಅಮಾಯಕ 42ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ