ಕುಂದಾಪುರ: ಕಾರೊಂದು ಚಾಲಕ ನಿಯಂತ್ರಣ ತಪ್ಪಿ ರಸ್ತೆ ಸಮೀಪದ ಶೌಚಾಲಯ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಎಂಜಿನ್ ಸ್ಪೋಟಗೊಂಡು ಕಾರಿನೊಳಗಿದ್ದ ಕುಂದಾಪುರ ಮೂಲದ ನಾಲ್ವರು ಸಜೀವ ದಹನಗೊಂಡ ಖೇದಕರ ಘಟನೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚನ್ನರಾಯ ಪಟ್ಟಣದ ಉದಯಪುರ ಎಂಬಲ್ಲಿ ಬುಧವಾರ ತಡರಾತ್ರಿ ಘಟಿಸಿದೆ.
ಕುಂದಾಪುರ ತಾಲೂಕಿನ ಗುಜ್ಜಾಡಿ ಸಮೀಪದ ನಾಯಕವಾಡಿ ನಿವಾಸಿ ವಿವೇಕ ನಾಯಕ್(39), ಪತ್ನಿ ರೇಷ್ಮಾ, ಮಕ್ಕಳಾದ ವಿನಂತಿ(9) ಹಾಗೂ ವಿಘ್ನೇಶ್(5) ಸಾವನ್ನಪ್ಪಿದ ದುರ್ದೈವಿಗಳು.
ವಿವೇಕ್ ನಾಯಕ್ ಮುಂಬೈ ಮೂಲದ ಗಾರ್ಮೆಂಟ್ ಕಂಪೆನಿಯೊಂದರ ಬೆಂಗಳೂರು ಕಚೇರಿಯಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ವಿವೇಕ್ ನಾಯಕ್ ಅವರ ಮೂಲ ಮನೆಯಾದ ಕುಂದಾಪುರದ ನಾಯಕವಾಡಿಯಲ್ಲಿ ಅವರ ತಂದೆಯ ಕಾರ್ಯಕ್ರಮವಿದ್ದ ಕಾರಣ ಬುಧವಾರ ರಾತ್ರಿ ಬೆಂಗಳೂರಿನಿಂದ ತನ್ನ ರಿಟ್ಝ್ ಕಾರಿನಲ್ಲಿ ಕುಟುಂಬ ಸಮೇತರಾಗಿ ಹೊರಟಿದ್ದರು.
ಕಾರು ಉದಯಪುರ ಸಮೀಪಿಸುತ್ತಿದ್ದಂತೆ ಏಕಾಏಕಿಯಾಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆಯ ಸಮೀಪದಲ್ಲೇ ಇದ್ದ ಶೌಚಾಲಯಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಕಾರಿನ ಎಂಜಿನ್ನಲ್ಲಿ ಸ್ಪೋಟ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಕಾರು ಹೊತ್ತಿ ಉರಿದಿದೆ. ಘಟನೆಯಲ್ಲಿ ಕಾರಿನೊಳಗಿದ್ದ ನಾಲ್ವರೂ ಸಂಪೂರ್ಣ ಸುಟ್ಟು ಹೋಗಿದ್ದಾರೆ. ಈ ಕುರಿತು ಚನ್ನರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.