ಆನ್‌ಲೈನ್ ಗೇಮ್ ಗಳನ್ನು ನಿಷೇಧಿಸುವ ಕಾನೂನು ಜಾರಿಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಆನ್‌ಲೈನ್ ಗೇಮಿಂಗ್ ಜನರ, ಅದರಲ್ಲೂ ವಿಶೇಷವಾಗಿ ಯುವಜನರ ಜೀವನವನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿ ಹಲವಾರು ರಾಜ್ಯಗಳು ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸಲು ಕಾನೂನನ್ನು ಜಾರಿಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿದೆ. ಗುಜರಾತ್‌ನ ಏಕತಾನಗರದಲ್ಲಿ ನಡೆದ ಎರಡು ದಿನಗಳ ಕಾನೂನು ಸಚಿವರು ಮತ್ತು ಎಲ್ಲಾ ರಾಜ್ಯಗಳ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಈ ಬೇಡಿಕೆಯನ್ನು ಸಲ್ಲಿಸಲಾಗಿದೆ.

ಹಲವಾರು ಯುವಕರು ಬೆಟ್ಟಿಂಗ್ ಮತ್ತು ಪಂತದ ಆನ್‌ಲೈನ್ ಗೇಮಿಂಗ್ ನಲ್ಲಿ ಅಪಾರ ಪ್ರಮಾಣದ ಹಣ ಕಳೆದುಕೊಳ್ಳುತ್ತಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇಂತಹ ವ್ಯಸನಾಧಾರಿತ ಆಟಗಳನ್ನು ನಿಷೇಧಿಸಬೇಕೆಂದು ಕರ್ನಾಟಕ, ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳು ಕೇಂದ್ರವನ್ನು ಒತ್ತಾಯಿಸಿವೆ.

ಸಮಾಜದ ಮೇಲೆ ಆನ್‌ಲೈನ್ ಗೇಮ್ ಮತ್ತು ಜೂಜಾಟದ ದುಷ್ಪರಿಣಾಮಗಳ ಬಗ್ಗೆ ಕೇಂದ್ರಕ್ಕೆ ತಿಳಿದಿದ್ದು, ಈ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಸಮ್ಮೇಳನದಲ್ಲಿ ಭಾಗವಹಿಸಿದ್ದ ರಾಜ್ಯ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡಿನಂತಹ ರಾಜ್ಯಗಳು ಇಂತಹ ಜೂಜಾಟದ ಆಟಗಳನ್ನು ಕಾನೂನಾತ್ಮಕವಾಗಿ ನಿಷೇಧಿದ್ದರೂ ಸಂಬಂಧಪಟ್ಟ ನ್ಯಾಯಾಲಯಗಳು ಈ ಕಾನೂನುಗಳು ಅಸಂವಿಧಾನಿಕ ಎಂಬ ಕಾರಣ ನೀಡಿ ನಿಷೇಧವನ್ನು ತೆರೆವುಗೊಳಿಸಿವೆ. ಹಾಗಾಗಿ ಕೇಂದ್ರ ಸರಕಾರವು ಸಂಸತ್ತಿನ ಮೂಲಕ ಕಾನೂನನ್ನು ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.