ಶಾಲಾ ಪಠ್ಯ ಪುಸ್ತಕ ವಿವಾದ: ಸರಿಪಡಿಸಿದ ಪಠ್ಯ ಪುಸ್ತಕಗಳನ್ನು ಉಚಿತ ಬುಕ್‌ಲೆಟ್ ರೂಪದಲ್ಲಿ ನೀಡಲು ನಿರ್ಧಾರ

ಬೆಂಗಳೂರು: ಪಠ್ಯಪುಸ್ತಕದಲ್ಲಿ ಕಂಡು ಬಂದ ತಪ್ಪುಗಳನ್ನು ತಿದ್ದುಪಡಿ ಮಾಡಿ ಹೊಸ ಪಠ್ಯಪುಸ್ತಕ ಮುದ್ರಿಸಿ ವಿತರಣೆ ಮಾಡಲು ಶಿಕ್ಷಣ ಇಲಾಖೆ ತೀರ್ಮಾನ ಮಾಡಿದೆ. ಹೊಸ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೆ ಬುಕ್ ಲೆಟ್ ರೂಪದಲ್ಲಿ ವಿತರಿಸಲು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯು ತೀರ್ಮಾನಿಸಿದೆ. ತಿದ್ದುಪಡಿ ಮಾಡಿದ ಅಂಶಗಳ ಸಾಫ್ಟ್‌ ಪ್ರತಿಗಳನ್ನು ಜಾಲತಾಣದಲ್ಲಿ ಪ್ರಕಟಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈಗಾಗಲೇ ಪರಿಷ್ಕರಿಸಿರುವ ಪಠ್ಯಪುಸ್ತಕಗಳಲ್ಲಿ ಬಿಟ್ಟುಹೋದ ಅಂಶಗಳನ್ನು ತಿದ್ದುಪಡಿ ಹಾಗೂ ಸೇರ್ಪಡೆ ಮಾಡಿ ತಿದ್ದೋಲೆ ಹೊರಡಿಸಲು ಅನುಮತಿ ನೀಡಿ ಆದೇಶಿಸಿದೆ. ಇಲಾಖೆಯು ಶಾಲಾ ಪಠ್ಯಪುಸ್ತಕಗಳಲ್ಲಿ ಎಂಟು ತಿದ್ದುಪಡಿಗಳಿಗೆ ಆದೇಶಿಸಿದೆ.

ಶಾಲಾ ಪಠ್ಯಪುಸ್ತಕಗಳ ರಚನೆ ಅಥವಾ ಪರಿಷ್ಕರಣೆಗಳಾದಾಗ ಅಗತ್ಯವಾದ ತಿದ್ದುಪಡಿಗಳನ್ನು ತಿದ್ದೋಲೆ ರೂಪದಲ್ಲಿ ನೀಡಲಾಗುತ್ತದೆ. ಇದು ಶಿಕ್ಷಣ ಇಲಾಖೆಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪಕ್ರಿಯೆಯಾಗಿದೆ. ಅಗತ್ಯವಿರುವ ತಿದ್ದೋಲೆ ಪ್ರತಿಗಳನ್ನು ಮುದ್ರಿಸಲು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಈಗಾಗಲೇ ಪಠ್ಯಪುಸ್ತಕ ಮುದ್ರಣಕ್ಕೆ ಕಾರ್ಯಾದೇಶ ಪಡೆದಿರುವ ಎಲ್ -1 ದರ ನಮೂದಿಸಿರುವ ಮುದ್ರಕರಿಂದ ಮುದ್ರಿಸಿ ಎಲ್ಲಾ ಸರ್ಕಾರಿ, ಅನುದಾನಿತ ಶಾಲೆ ಹಾಗೂ ಅನುದಾನ ರಹಿತ ಶಾಲೆಗಳಿಗೆ ಉಚಿತವಾಗಿ ವಿತರಿಸಲು ಆದೇಶ ನೀಡಲಾಗಿದೆ. ತಿದ್ದೋಲೆ ವಿಷಯಾಂಶಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ಜಾಲ‌ತಾಣದಲ್ಲಿ ಪ್ರಕಟಿಸಲು ಸರ್ಕಾರ ಆದೇಶಿಸಿದೆ.