ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿಭಿನ್ನವಾಗಿ ಪ್ರೇಮಿಗಳ ದಿನಾಚರಣೆ

ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್‌ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ
ವತಿಯಿಂದ ಬೀಡಿನಗುಡ್ಡೆಯ ನಿರಾಶ್ರಿತರ ಕೇಂದ್ರದಲ್ಲಿ ಗುರುವಾರ ನಿರ್ಗತಿಕರನ್ನು
ಕರೆದುಕೊಂಡು ಬಂದು ಅವರನ್ನು ಆರೈಕೆ ಮಾಡಿ ಅವರೊಂದಿಗೆ ಊಟ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲಾಯಿತು.
ಮನೆಯಿಂದ ಹೊರಹಾಕಲ್ಪಟ್ಟ ವೃದ್ಧರು, ಬಸ್‌ ನಿಲ್ದಾಣಗಳಲ್ಲಿ ಅಲೆದಾಡುತ್ತಿದ್ದ
ನಿರ್ಗತಿಕರು ಹಾಗೂ ಮಾನಸಿಕ ಅಸ್ವಸ್ಥರು ಸೇರಿದಂತೆ ಒಟ್ಟು ಐದಾರು ಮಂದಿ
ನಿರಾಶ್ರಿತರನ್ನು ಕರೆದುಕೊಂಡು ಬಂದು ಅವರಿಗೆ ಸ್ನಾನ ಮಾಡಿ ಅವರನ್ನು ಶುಚಿಗೊಳಿಸಿ
ಅವರಿಗೆ ಹೊಸ ಬಟ್ಟೆಗಳನ್ನು ನೀಡಲಾಯಿತು. ಕರವೇ ಜಿಲ್ಲಾಧ್ಯಕ್ಷ ಅನ್ಸರ್‌ ಅಹ್ಮದ್‌
ಸ್ವತಃ ನಿರ್ಗತಿಕರ ತಲೆ ಕೂದಲನ್ನು ಕತ್ತರಿಸಿ, ಗಡ್ಡ ಸೇವಿಂಗ್‌ ಮಾಡಿ ಅವರಿಗೆ ಸ್ನಾನ
ಮಾಡಿಸಿದರು. ಎಲ್ಲ ನಿರಾಶ್ರಿತರಿಗೂ ಹೊಸ ಬಟ್ಟೆಗಳನ್ನು ನೀಡಿ ಪ್ರೇಮಿಗಳ ದಿನಾಚರಣೆಯ
ಶುಭಾಶಯವನ್ನು ಕೋರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನ್ಸರ್‌ ಅಹ್ಮದ್‌ ಅವರು, ಪ್ರೇಮಿಗಳ ದಿನ
ಎಂಬುವುದು ನಿರ್ಗತಿಕರು ಹಾಗೂ ಅನಾಥರನ್ನು ಪ್ರೀತಿಸುವ ದಿನವಾಗಬೇಕು. ಅದಕ್ಕಾಗಿ
ವೇದಿಕೆಯ ವತಿಯಿಂದ ರಸ್ತೆ ಬದಿಗಳಲ್ಲಿ ಅಲೆದಾಡುತ್ತಿರುವ ಮಾನಸಿಕ ಅಸ್ವಸ್ಥರು ಹಾಗೂ
ನಿರ್ಗತಿಕರನ್ನು ಕರೆದುಕೊಂಡು ಬಂದು, ಅವರನ್ನು ಆರೈಕೆ ಮಾಡಿ ಅವರೊಂದಿಗೆ ಊಟ ಮಾಡುವ ಮೂಲಕ ಪ್ರೇಮಿಗಳ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು
ಬರಲಾಗುತ್ತಿದೆ. ಅದೇ ರೀತಿಯಲ್ಲಿ ಈ ಬಾರಿಯೂ 10 ಮಂದಿ ನಿರಾಶ್ರಿತರ ಆರೈಕೆ ಮಾಡಿ
ಅವರಿಗೆ ಹೊಸ ಬಟ್ಟೆಗಳನ್ನು ನೀಡುವ ಮೂಲಕ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದೇವೆ
ಎಂದರು.
ಪ್ರೇಮಿಗಳ ದಿನ ಎಂಬುವುದು ಕೇವಲ ಹುಡುಗ–ಹುಡುಗಿಯರು ಪಾರ್ಕ್‌ ಸುತ್ತುವುದಕ್ಕೆ
ಸೀಮಿತವಾಗಬಾರದು. ಈ ದಿನವೂ ಒಂದು ಮಹತ್ವದ ದಿನ ಆಗಬೇಕು. ಆದ್ದರಿಂದ ಯುವಜನರು ನಿರ್ಗತಿಕರನ್ನು ರಕ್ಷಿಸಿ ಅವರಿಗೆ ಆಶ್ರಯ ಒದಗಿಸುವ ಮೂಲಕ ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.
ವೇದಿಕೆಯ ಕಾರ್ಯಕರ್ತರಾದ ಸುಧೀರ್‌ ಪೂಜಾರಿ, ವಾಸೀಂ ಅಹ್ಮದ್‌ ಉಡುಪಿ, ಸಫನ್‌ ಉಡುಪಿ, ಪ್ರವೀಣ್‌ ಬಾರ್ಕೂರು ಮೊದಲಾದವರು ಸಹಕರಿಸಿದರು.