ಪಿ.ಎಫ್.ಐ ತಕ್ಷಣ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ರೆಹಬ್ ಇಂಡಿಯಾ ಫೌಂಡೇಶನ್ (ಆರ್‌ಐಎಫ್) ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಅದರ ಸಹವರ್ತಿ ಸಂಸ್ಥೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ)ಕಾಯಿದೆ, ಅಡಿಯಲ್ಲಿ ಐದು ವರ್ಷಗಳ ಕಾಲ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಪಿಎಫ್‌ಐ ಕಾರ್ಯಕರ್ತ ನಾಸೀರ್ ಪಾಷಾ ಎಂಬವರು ಪತ್ನಿ ಮೂಲಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಪಾಷಾ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್, ಯುಎಪಿಎ ಕಾಯ್ದೆಯಡಿ ಸೆಕ್ಷನ್ (3)ರ ಉಪವಿಭಾಗ 3ರ ಪ್ರಕಾರ, ನಿಷೇಧವನ್ನು ತಕ್ಷಣವೇ ಜಾರಿಗೆ ತರಲು ಸಕ್ಷಮ ಪ್ರಾಧಿಕಾರ ಪ್ರತ್ಯೇಕ ಮತ್ತು ವಿಭಿನ್ನ ಕಾರಣಗಳನ್ನು ದಾಖಲಿಸುವುದು ಕಡ್ಡಾಯವಾಗಿತ್ತು ಎಂದು ಮನವಿ ಮಾಡಿದ್ದರು.

2007-08ನೇ ಸಾಲಿನಲ್ಲಿ ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆಯಡಿಯಲ್ಲಿ ಪಿಎಫ್‌ಐ ನೋಂದಣಿಯಾಗಿದ್ದು, ಸಮಾಜದ ದೀನದಲಿತರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಭಾರತ ಸಂವಿಧಾನದ ಪರಿಚ್ಛೇದ 19 (1) (ಸಿ) ಅಡಿಯಲ್ಲಿ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ನಿಗ್ರಹಿಸಲು ಹಲವಾರು ಅಪರಾಧ ಘಟನೆಗಳ ಆಧಾರದ ಮೇಲೆ ಭಾರತ ಒಕ್ಕೂಟವು ತನ್ನ ಸಾರ್ವಭೌಮ ಅಧಿಕಾರವನ್ನು ನಿರಂಕುಶವಾಗಿ ಚಲಾಯಿಸಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಭಾರತದ ಒಕ್ಕೂಟದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮನವಿಯನ್ನು ವಿರೋಧಿಸಿ, ನಿಷೇಧವನ್ನು ಘೋಷಿಸಲು ಅಧಿಸೂಚನೆಯಲ್ಲಿ ಅಗತ್ಯ ಕಾರಣಗಳನ್ನು ಒದಗಿಸಲಾಗಿದೆ ಮತ್ತು ಇದರಲ್ಲಿ ಕಾನೂನುಬಾಹಿರ ಏನೂ ಇಲ್ಲ ಎಂದು ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಕೇಂದ್ರ ಗೃಹ ಸಚಿವಾಲಯ ಪಿಎಫ್‌ಐ ಮೇಲೆ ನಿಷೇಧ ಹೇರಿದೆ. ಗೃಹ ವ್ಯವಹಾರಗಳ ಸಚಿವಾಲಯವು, ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳು ಐಸಿಸ್‌ನಂತಹ ಭಯೋತ್ಪಾದಕ ಗುಂಪುಗಳೊಂದಿಗೆ ಸಂಬಂಧ ಹೊಂದಿವೆ ಮತ್ತು ದೇಶ ವಿರೋಧಿ ಭಾವನೆಗಳನ್ನು ಪ್ರಚಾರ ಮಾಡುತ್ತವೆ ಎಂದು ಹೇಳಿದೆ.