ಬೆಂಗಳೂರು: 2022-23ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಪಾಳಿಯ ಆಧಾರದ ಮೇಲೆ ಕಾರ್ಯನಿರ್ವಹಿಸಲಿವೆ ಎಂದು ಪ.ಪೂ ಶಿಕ್ಷಣ ಇಲಾಖೆಯು ತಿಳಿಸಿದೆ.
ತನ್ನ ಪ.ಪೂ ಕಾಲೇಜುಗಳಲ್ಲಿ ಪ್ರವೇಶಾತಿಗಿರುವ ಬೇಡಿಕೆಯನ್ನು ಪರಿಗಣಿಸಿ, ಸರ್ಕಾರವು ಎರಡು ಪಾಳಿಯಲ್ಲಿ ತರಗತಿಗಳನ್ನು ನಡೆಸಲು ನಿರ್ಧರಿಸಿದೆ. ಆದಾಗ್ಯೂ, ಈ ವ್ಯವಸ್ಥೆಯು ಹೆಚ್ಚಿನ ಸಂಖ್ಯೆಯ ಪ್ರವೇಶಾತಿಗಳಿರುವ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಸಂಖ್ಯೆ ಎಷ್ಟಿದ್ದರೂ ಸರ್ಕಾರಿ ಪ.ಪೂ ಕಾಲೇಜುಗಳು ಯಾವುದೇ ವಿದ್ಯಾರ್ಥಿಯ ಪ್ರವೇಶವನ್ನು ನಿರಾಕರಿಸುವಂತಿಲ್ಲ.
ತರಗತಿಗಳು ಪಾಳಿಯಲ್ಲಿ ನಡೆಯುವುದನ್ನು ದೃಢಪಡಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಖಾಸಗಿ ಮಾಧ್ಯಮದ ಜೊತೆ ಮಾತನಾಡುತ್ತಾ, “ಎಲ್ಲಿ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆಯೋ, ಅಲ್ಲಿ ನಾವು ಶಿಫ್ಟ್ ಆಧಾರದ ಮೇಲೆ ತರಗತಿಗಳನ್ನು ನಡೆಸುತ್ತೇವೆ. ಉದಾಹರಣೆಗೆ, ಕಲೆ ಮತ್ತು ವಿಜ್ಞಾನ ತರಗತಿಗಳು ಬೆಳಿಗ್ಗಿನ ಪಾಳಿಯಲ್ಲಿ ಮತ್ತು ಮಧ್ಯಾಹ್ನದ ಪಾಳಿಯಲ್ಲಿ ವಾಣಿಜ್ಯ ತರಗತಿಗಳು ನಡೆಯಲಿವೆ” ಎಂದರು.
ಪ್ರಸ್ತುತ ಕಾಲೇಜುಗಳಲ್ಲಿರುವ ಮೂಲಸೌಕರ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ, ಆದರೆ ತರಗತಿಯೊಳಗೆ ವಿದ್ಯಾರ್ಥಿಗಳಿಗೆ ಅನಾನುಕೂಲತೆಯನ್ನು ತಪ್ಪಿಸಲು, ಎರಡು ಪಾಳಿಗಳಲ್ಲಿ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಕೆಲವು ಬಹು ಬೇಡಿಕೆಯ ಸರ್ಕಾರಿ ಪ.ಪೂ ಕಾಲೇಜುಗಳಿದ್ದು, ಕೆಲವೊಂದು ವಿಭಾಗಗಳಿಗೆ, ಉದಾ: ಕಲಾ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಕಾಲೇಜುಗಳು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿರುತ್ತವೆ. ಹೆಚ್ಚಿನ ಸಂಖ್ಯೆಯಿಂದ ವಿದ್ಯಾರ್ಥಿಗಳಿಗಾಗುವ ಅನಾನುಕೂಲತೆಗಳನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.