ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎನ್ನಲಾದ ಕಾಂಗ್ರೆಸ್ ಚುನಾವಣಾ ತಂತ್ರಗಾರ ಸುನಿಲ್ ಕನುಗೋಳು ಅವರನ್ನು ಸಂಪುಟ ಸಚಿವರ ದರ್ಜೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖ್ಯ ಸಲಹೆಗಾರರಾಗಿ ಬುಧವಾರ ನೇಮಿಸಲಾಗಿದೆ.
ಸುನಿಲ್ ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿರುವ ಸುನಿಲ್ ಅಲ್ಲೇ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಮೂಲತಃ ತೆಲುಗು ಭಾಷಿಕರಾಗಿದ್ದರೂ, ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಈ ಹಿಂದೆ ಬಿಜೆಪಿ, ಡಿಎಂಕೆ, ಎಐಎಡಿಎಂಕೆ ಪಕ್ಷಗಳ ಜೊತೆ ಕೆಲಸ ಮಾಡಿರುವ ಅನುಭವ ಸುನಿಲ್ ಅವರಿಗಿದೆ.
ಕಳೆದ ವರ್ಷ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಪ್ರಸ್ತಾಪವನ್ನು ಪ್ರಶಾಂತ್ ಕಿಶೋರ್ ನಿರಾಕರಿಸಿದ ನಂತರ, ಭಾರತದಾದ್ಯಂತ ಹಲವಾರು ವಿಧಾನಸಭಾ ಚುನಾವಣೆಗಳಿಗೆ ಪಕ್ಷದ ಚುನಾವಣಾ ಕಾರ್ಯತಂತ್ರಕ್ಕೆ ಸಹಾಯ ಮಾಡಲು ಸುನಿಲ್ ಅವರನ್ನು ಮುನ್ನೆಲೆಗೆ ತರಲಾಯಿತು. ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ ಸುಮಾರು 4,000 ಕಿ.ಮೀ ಉದ್ದದ ಪಾದಯಾತ್ರೆಯನ್ನು ಒಳಗೊಂಡ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಹಿಂದೆ ಸುನಿಲ್ ಅವರ ಚುನಾವಣಾ ತಂತ್ರಗಾರಿಕೆ ಇದೆ ಎನ್ನಲಾಗಿದೆ.