ಕಾರ್ಕಳ: ಕಾರ್ಕಳ ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ‘ಕಾರ್ಲ ಕಜೆ’ ಭತ್ತವನ್ನು ಸಂಶೋಧನೆಗೊಳಪಡಿಸಿ ಅದರಲ್ಲಿರುವ ಖನಿಜಾಂಶವನ್ನು ಪತ್ತೆಹಚ್ಚಿ, ಭತ್ತದ ವೈಶಿಷ್ಟತೆಯ ಆಧಾರದ ಮೇಲೆ ಮಾನ್ಯತೆ ನೀಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿಗೆ ಸೂಚನೆ ನೀಡಿದರು.
ಸೋಮವಾರ ಕಾರ್ಕಳದಲ್ಲಿ ‘ಕಾರ್ಲ ಕಜೆ’ ಕುಚ್ಚಲಕ್ಕಿ ಬ್ರಾಂಡ್ ಬಿಡುಗಡೆ ಮಾಡಿ ಮಾತನಾಡಿದರು.
ಕಾರ್ಲ ಕಜೆ ಭತ್ತದ ತಳಿಯನ್ನು ಸರ್ಕಾರದ ಎಂಎಸ್‌ಪಿ ಯೋಜನೆಯಡಿ ಸೇರ್ಪಡೆಗೊಳಿಸಬೇಕು ಎಂದು ಹೇಳಿದರು.
ರೈತರು ಇಸ್ರೇಲ್ ತಂತ್ರಜ್ಞಾನವನ್ನು ಬದಲಾಗಿ ಸ್ವದೇಶಿಯ ಕೋಲಾರ ಮಾದರಿಯನ್ನು ಅಳವಡಿಸಿಕೊಂಡರೆ, ಸಂಕಷ್ಟದಿಂದ ಹೊರಬರಬಹುದು. ಕೋಲಾರದ ಸಮಗ್ರ ಕೃಷಿ ಮಾದರಿಯನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳಬೇಕು. ಇದರಿಂದ ರೈತರಿಗೆ ಒಳ್ಳೆಯ ಫಸಲು ತೆಗೆಯುವುದರ ಜತೆಗೆ ಉತ್ತಮ ಆದಾಯ ಗಳಿಸಬಹುದು. ಕೋಲಾರದಲ್ಲಿ ಮಳೆಯೂ ಕಡಿಮೆ, ಅಂತರ್ಜಲ ಮಟ್ಟ ಕುಸಿದಿದೆ. ಆದರೂ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯ ಮೂಲಕ ಅಲ್ಲಿನ ರೈತರು ಹೆಚ್ಚು ಆದಾಯ ಗಳಿಸುತ್ತಿದ್ದಾರೆ ಎಂದು ಅವರು ಸಲಹೆ ನೀಡಿದರು.
ಶಾಸಕರು ಎಂದರೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನಡೆಸಿ, ಅದನ್ನು ಜಾರಿಗೊಳಿಸಲು ಸೀಮಿತರಾಗಿರುತ್ತಾರೆ. ಆದರೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಕಾರ್ಲ ಕಜೆ ಎಂಬ ವಿನೂತನ ಅಕ್ಕಿ ಬ್ರಾಂಡ್ ಬಿಡುಗಡೆಗೊಳಿಸುವ ಮೂಲಕ ರೈತ ಸ್ನೇಹಿ ಶಾಸಕ ಎನಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಮಾತನಾಡಿ, ಕಾರ್ಕಳದ ಕನಸನ್ನು ಈಡೇರಿಸುವ ಉದ್ದೇಶದಿಂದ ಕಾರ್ಕಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಕಜೆ ಕುಚ್ಚಲಕ್ಕಿ ಹಾಗೂ ಬಿಳಿಬೆಂಡೆಯನ್ನು ನಮ್ಮ ತಾಲುಕಿನ ಬ್ರಾಂಡ್ ಆಗಿ ಬಿಡುಗಡೆಗೊಳಿಸಲಾಗಿದೆ. ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ರೈತರ ಪರಿಶ್ರಮದ ಫಲವಾಗಿ ಆಯಾ ಭಾಗದಲ್ಲಿ ಅವರು ಬೆಳೆದ ಉತ್ಪನ್ನಗಳು ಬ್ರಾಂಡ್ ಆಗಿ ರೂಪುಗೊಂಡಿವೆ. ಇದೇ ರೀತಿಯಲ್ಲಿ ನಮ್ಮ ರೈತರು ಕಾರ್ಲ ಕಜೆ ತಳಿಯ ಭತ್ತವನ್ನು ಬೆಳೆಸಬೇಕು. ಕಾರ್ಕಳವನ್ನು ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಲ ಕಜೆ ಬ್ರಾಂಡ್ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಸುಮಿತ್ ಶೆಟ್ಟಿ, ಜಿಪಂ ಸದಸ್ಯರಾದ ರೇಷ್ಮಾ ಉದಯ್ ಶೆಟ್ಟಿ, ಉದಯ್ ಎಸ್. ಕೋಟ್ಯಾನ್, ಜಿ.ಪಂ ಸಿಇಓ ಡಾ. ನವೀನ್ ಭಟ್, ಜಂಟಿ ಕೃಷಿ ನಿರ್ದೇಶಕರ ಕೆಂಪೇಗೌಡ, ತಾಪಂ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಸ್ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ಮೊದಲಾದವರು ಉಪಸ್ಥಿತರಿದ್ದರು.