ಉಡುಪಿ: ಕಾರ್ಕಳದ ಕೋಟಿ- ಚೆನ್ನಯ್ಯ ಥೀಮ್ ಪಾರ್ಕ್ ಆವರಣದಲ್ಲಿ ಎರಡು ಎಕರೆ ಜಾಗದಲ್ಲಿ ಯಕ್ಷರಂಗಾಯಣ ನಿರ್ಮಾಣ ಮಾಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಹೇಳಿದರು.
ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸದ್ಯ ಒಟ್ಟು ಐದು ರಂಗಾಯಣ ಕಾರ್ಯನಿರ್ವಹಿಸುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಒಳಗೊಂಡಂತೆ ಕರಾವಳಿ ಭಾಗಕ್ಕೆ ಒಂದು ರಂಗಾಯಣ ಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇದೆ. ಈ ನಿಟ್ಟಿನಲ್ಲಿ ಯಕ್ಷಗಾನ, ನಾಟಕ ಮತ್ತು ನೃತ್ಯ ಇದೆಲ್ಲವನ್ನು ಒಳಗೊಂಡ ‘ಯಕ್ಷರಂಗಾಯಣ’ ಕಾರ್ಕಳದಲ್ಲಿ ಆರಂಭವಾಗಬೇಕೆಂದು ನಿರ್ಣಯ ಮಾಡಿ ಆದೇಶ ಹೊರಡಿಸಿದ್ದೇನೆ. ಕರ್ನಾಟಕದ ಆರನೇ ರಂಗಾಯಣ ಕರ್ಕಾಳದಲ್ಲಿ ಆರಂಭವಾಗಲಿದೆ ಎಂದರು.
ಯಕ್ಷಗಾನ, ನಾಟಕ, ನೃತ್ಯ ಹಾಗೂ ಸಂಗೀತ ಇದೆಲ್ಲವನ್ನೂ ಒಳಗೊಂಡ ತರಬೇತಿ ಶಾಲೆ ಹಾಗೂ ತರಬೇತಿ ಕೇಂದ್ರವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಉಡುಪಿ ಜಿಲ್ಲಾ ರಂಗಮಂದಿರಕ್ಕೆ ಈ ಹಿಂದಿನ ಸರ್ಕಾರ ಸ್ಪಷ್ಟವಾಗಿ ಅನುದಾನ ನಮೂದಿಸದೆ ಗುದ್ದಲಿಪೂಜೆ ನೆರವೇರಿಸಿದೆ. ಈ ವರ್ಷದ ಅನುದಾನದ ಲಭ್ಯತೆ ನೋಡಿಕೊಂಡು ಅದನ್ನು ಮುಂದುವರಿಸುವ ಕಾರ್ಯ ಮಾಡುತ್ತೇನೆ ಎಂದರು.