ಕಾರ್ಕಳ: ರಸ್ತೆ ಬದಿಯಲ್ಲಿ ಮೊಬೈಲ್ ನಲ್ಲಿ ಮಾತನಾಡಿಕೊಂಡು ನಿಂತಿದ್ದ ವೇಳೆ ಖಾಸಗಿ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಫಾರೆವರ್ ಸಮೀಪ ಇಂದು ಸಂಭವಿಸಿದೆ.
ನಿಟ್ಟೆ ಗ್ರಾಮದ ಶಿಕ್ಷಣ ತಜ್ಞ ವಸಂತ ಕುಮಾರ್ ನಿಟ್ಟೆ (45) ಮೃತ ವ್ಯಕ್ತಿ. ಇವರು ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಕಾರ್ಕಳದಿಂದ ಪಡುಬಿದ್ರಿ ಕಡೆಗೆ ಸಾಗುತ್ತಿದ್ದ ವಿಶಾಲ್ ಬಸ್ ರಸ್ತೆಯ ಎಡ ಭಾಗಕ್ಕೆ ಬಂದು ವಸಂತ ಅವರ ಬೈಕ್ ಡಿಕ್ಕಿ ಹೊಡೆದಿದೆ.
ಇದರಿಂದ ಶಿಕ್ಷಕ ವಸಂತ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವಸಂತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.