ಕಾರ್ಕಳ: ಈ ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಬೇರೆ ಕ್ಷೇತ್ರಗಳಿಗೆ ಸ್ಟಾರ್ ಪ್ರಚಾರಕರಾಗಿ ಹೋಗಿದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಈ ಬಾರಿ ತನ್ನ ಸೋಲಿನ ಭಯದಿಂದ ಸ್ಟಾರ್ ಕ್ಯಾಂಪೇನರ್ ಯೋಗಿ ಅವರನ್ನು ಕಾರ್ಕಳಕ್ಕೆ ಕರೆಸಿಕೊಳ್ಳುವಂತಹ ಸ್ಥಿತಿಗೆ ಬಂದದ್ದು ವಿಷರ್ಯಾಸ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶುಭದ್ ರಾವ್ ಹೇಳಿದ್ದಾರೆ.
ಅವರು ಕಾರ್ಕಳ ಹೊಟೇಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಕಾರ್ಕಳ ಕಾಂಗ್ರೆಸ್ ಗೆ ಸ್ಟಾರ್ ಪ್ರಚಾರಕರ ಅವಶ್ಯಕತೆಯಿಲ್ಲ, ನಮಗೆ ನಮ್ಮ ಅಮೂಲ್ಯ ಕಾರ್ಯಕರ್ತರೇ ನಮ್ಮ ಸ್ಟಾರ್ ಕ್ಯಾಂಪೇನರ್ ಎಂದವರು ಹೇಳಿದರು.
ಕಾರ್ಕಳ ಬಿಜೆಪಿ ವಿರುದ್ಧ ಆಕ್ರೋಶದ ಅಲೆ:
ಕಾರ್ಕಳ ಶಾಸಕರ ಭ್ರಷ್ಟಾಚಾರ, ಅನೈತಿಕ ಕೆಲಸ ಕಾರ್ಯಗಳಿಂದ ಇಡೀ ತಾಲೂಕಿನಲ್ಲೇ ಶಾಸಕರ ವಿರುದ್ಧ ಆಕ್ರೋಶದ ಅಲೆಗಳಿವೆ. ಈ ಬಾರಿಯ ಚುನಾವಣೆಯನ್ನು ಹೇಗಾದರೂ ಮಾಡಿ ಗೆಲ್ಲಬೇಕೆನ್ನುವ ಉದ್ದೇಶದಿಂದ ಯೋಗಿ, ಅಣ್ಣಾಮಲೈ ಅವರಂತಹ ಸ್ಟಾರ್ ಪ್ರಚಾರಕರನ್ನು ಕಾರ್ಕಳ ಕ್ಕೆ ಕರೆಸಿಕೊಳ್ಳುತ್ತಿದ್ದಾರೆ, ಸತ್ಯವೆಂದರೆ, ಯಾರೇ ಸ್ಟಾರ್ ಪ್ರಚಾರಕರು ಬಂದಿದ್ದರೂ ಕಾಂಗ್ರೆಸ್ ಗೆ ಯಾವ ನಷ್ಟವೂ ಇಲ್ಲ.ಜನ ಮುನಿಯಾಲು ಉದಯ್ ಶೆಟ್ಟಿಯ ಪರವಾಗಿದ್ದಾರೆ ಎಂದರು.
ಭ್ರಷ್ಟಾಚಾರ ಸುದ್ದಿಗೆ ಹೆದರಿದ ಶಾಸಕ:
ವಿ ಸುನಿಲ್ ಕುಮಾರ್ ಅವರ ಇಂಧನ ಇಲಾಖೆಗೆ ಸಂಬಂಧಿಸಿದ ಭ್ರಷ್ಟಾಚಾರ ಕುರಿತಂತೆ ಖಾಸಗಿ ಸುದ್ದಿವಾಹಿನಿಯೊಂದು ಪವರ್ ಕಟ್ ಎನ್ನುವ ಶೀರ್ಷಿಕೆಯಡಿ ಕಾರ್ಯಕ್ರಮ ಪ್ರಸಾರ ಮಾಡುವುದಕ್ಕೆ ಶಾಸಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಶಾಸಕರು ತಪ್ಪು ಮಾಡದಿದ್ದರೆ ತಡೆಯಾಜ್ಞೆ ತರುವ ಅವಶ್ಯಕತೆ ಏನಿತ್ತು? ಎನ್ನುವುದನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ.ನಿಜವಾಗಲೂ ಭ್ರಷ್ಟಾಚಾರ ಮಾಡಿರುವವರು ಮಾತ್ರ ಹೀಗೆ ಮಾಡಲು ಸಾಧ್ಯ.
ರೈತರ ಕೃಷಿ ಪಂಪ್ ಸೆಟ್ ಗಳಿಗೆ ಬಳಕೆಯಾಗುತ್ತಿರುವ ವಿದ್ಯುತ್ ಬಿಲ್ಲಿನಲ್ಲೂ ಭಾರೀ ಅವ್ಯವಹಾರ ನಡೆದಿದ್ದು,ಇಂಧನ ಇಲಾಖೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.ಇದಕ್ಕೆ ವಿ ಸುನಿಲ್ ಕುಮಾರ್ ಅವರೇ ಕಾರಣ.ಕಾರ್ಕಳ ಕ್ಷೇತ್ರವನ್ನು ಭ್ರಷ್ಟಾಚಾರದ ತಾಲೂಕು ಮಾಡಿದ ಖ್ಯಾತಿ ಇವರದ್ದು ಎಂದವರು ಹೇಳಿದರು.