ಕಾರ್ಕಳ: ಕಲ್ಯಾಣ ಮಂಟಪದಿಂದಲೇ ಮದುಮಗ ಎಸ್ಕೇಪ್; ವಧುವಿನ ಕುಟುಂಬಸ್ಥರಿಗೆ ಶಾಕ್

ಕಾರ್ಕಳ: ಮದುವೆಗೆ ಕೆಲವೇ ಸಮಯ ಬಾಕಿಯಿರುವಂತೆ ಮದುಮಗನೇ ಕಲ್ಯಾಣ ಮಂಟಪದಿಂದ ಪರಾರಿಯಾದ ಅಚ್ಚರಿಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ಕಾರ್ಕಳದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಡಿಸೆಂಬರ್ 10 ರಂದು ನಡೆದಿದೆ. ಮದುವೆಗೆ ಎಲ್ಲ ಸಿದ್ಧತೆ ನಡೆದಿತ್ತು. ಮುಹೂರ್ತಕ್ಕೆ ಕೆಲವೇ ಸಮಯ ಇದ್ದಾಗ ಮದುಮಗ ಎಸ್ಕೇಪ್ ಆಗಿದ್ದಾನೆ. ಇದರಿಂದ ವಧುವಿನ ಕಡೆಯವರು ಆತಂಕಕ್ಕೆ ಒಳಗಾಗಿದ್ದಾರೆ.

ಪಾರಾರಿಯಾದ ಹುಡುಗನಿಗೆ ಕಾರ್ಕಳದ ಹುಡುಗಿಯೊಂದಿಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಅದರಂತೆ ಡಿ. 10ರಂದು ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ವಿವಾಹಕ್ಕೆ ಸಕಲ ಸಿದ್ಧತೆ ನಡೆದಿತ್ತು.

ಡಿ. 9ರಂದೇ ವರನ ಕುಟುಂಬ, ಬಂಧು ಬಳಗದೊಂದಿಗೆ ಕಾರ್ಕಳಕ್ಕೆ ಆಗಮಿಸಿದ್ದರು. ಮದುಮಗ ಸ್ಥಳೀಯ ಲಾಡ್ಜ್ ನಲ್ಲಿ ತಂಗಿದ್ದು, ಬಳಿಕ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದನು. ಮದುವೆಗೆ ಮುನ್ನ ದಿನ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆ ಪೂರ್ವಭಾವಿ ಶಾಸ್ತ್ರದಲ್ಲಿ ಭಾಗವಹಿಸಿದ್ದನು.

ಅಲ್ಲದೆ ಡಿ. 10ರ ಬೆಳಿಗ್ಗೆ ಕಲ್ಯಾಣ ಮಂಟಪದಲ್ಲೇ ಇದ್ದನು. ಆದರೆ ಬಳಿಕ ದಿಢೀರ್ ಆಗಿ ನಾಪತ್ತೆಯಾಗಿದ್ದಾನೆ. ಅವನೊಂದಿಗೆ ಕುಟುಂಬದವರು ಬಂಧು-ಬಳಗದವರೂ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಮದುಮಗ ಹಾಗೂ ಆತನ ಕುಟುಂಬದವರು ಈ ರೀತಿ ಮಾಡಲು ಕಾರಣ ಏನೆಂಬುವುದು ಮಾತ್ರ ನಿಗೂಢವಾಗಿದೆ.