ಕಾರ್ಕಳ: ಕಾರ್ಕಳ ತಾಲ್ಲೂಕಿನ ಕೆಲವು ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋವುಗಳ ಕಳ್ಳತನದ ವಿರುದ್ಧ ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಅಜೆಕಾರು, ಶಿರ್ಲಾಲು, ಅಂಡಾರು, ಕೆರ್ವಾಶೆ ಭಾಗದಲ್ಲಿ ಹಟ್ಟಿಯಿಂದಲೇ ದನಗಳ ಕಳ್ಳತನವಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಶಿರ್ಲಾಲು ಒಂದೇ ಗ್ರಾಮದಲ್ಲಿ ಸುಮಾರು 25 ದನ ಕಳ್ಳತನವಾಗಿದೆ.
ತಾಲೂಕಿನಾದ್ಯಂತ ಎಗ್ಗಿಲ್ಲದೆ ನಡೆಯುತ್ತಿರುವ ಗೋ ಕಳ್ಳತನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗೋ ಕಳ್ಳರನ್ನು ಶೀಘ್ರವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ದನಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ ಹಾಗೂ ಜಿಲ್ಲಾ ಭೂ ಸುರಕ್ಷಾ ರಮೇಶ್ ಕಲ್ಲೊಟ್ಟೆ ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಸದಸ್ಯರು ಗೋ ಕಳಕೊಂಡವರ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದರು.
ಕಾರ್ಕಳ ಡಿವೈಎಸ್ಪಿಗೆ ಮನವಿ:
ಕಾರ್ಕಳ ತಾಲೂಕಿನಾದ್ಯಂತ ನಿರಂತರವಾಗಿ ನಡೆಯುತ್ತಿರುವ ಗೋಕಳ್ಳತನದ ವಿರುದ್ಧ ಸೂಕ್ತ ಕ್ರಮಕೈಗೊಂಡು, ಗೋಕಳ್ಳರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.
ಕಾರ್ಕಳ ತಾಲೂಕಿನ ಶಿರ್ಲಾಲು ಮತ್ತು ಕೆರ್ವಾಶೆ ಗ್ರಾಮದಲ್ಲಿ ಹಲವಾರು ಮನೆಯ ಹಟ್ಟಿಗೆ ನುಗ್ಗಿ ದನ ಕಳ್ಳತನವಾಗಿರುವ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೇಸು ದಾಖಲಾಗಿ 2 ದಿನವಾದರೂ ಪೊಲೀಸರು ಆ ಮನೆಗೆ ಭೇಟಿ ನೀಡಿ ವಿಚಾರಿಸಿಲ್ಲ. ಇದು ಅನುಮಾನಕ್ಕೆ ಎಡೆಮಾಡುವಂತಿದೆ. ಗೋ ಕಳ್ಳರ ವಿರುದ್ಧ ಕ್ರಮಕೈಗೊಳ್ಳದೇ ಗೊಕಳ್ಳತನ ನಡೆಸಲು ಪೊಲೀಸರೇ ನೇರ ಪ್ರೇರಣೆ ಕೊಟ್ಟಂತಿದೆ ಎಂದು ಹಿಂಜಾವೇ ದೂರಿದೆ.
ಗೋಕಳ್ಳತನದ ವಿರುದ್ಧ ಕ್ರಮಕೈಗೊಳ್ಳುವಂತೆ ಪೋಲಿಸ್ ಇಲಾಖೆಗೆ ಹಲವಾರು ಭಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಗೋ ಕಳ್ಳತನ ಎಗ್ಗಿಲ್ಲದೆ ಮುಂದುವರಿದಿದ್ದು, 5 ದಿನದೊಳಗಾಗಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, ಜಿಲ್ಲಾ ಭೂ ಸುರಕ್ಷಾ ರಮೇಶ್ ಕಲ್ಲೊಟ್ಟೆ ಎಚ್ಚರಿಕೆ ನೀಡಿದ್ದಾರೆ.
ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ, ಸುಭಾಷ್ ಬೋಳ, ಹರೀಶ್ ಬಜಗೋಳಿ, ಜಿಲ್ಲಾ ನಿಧಿ ಪ್ರಮುಖ್ ಉಮೇಶ್ ನಾಯ್ಕ್ ಸೂಡ, ಸುಜಿತ್ ಸಫಲಿಗ, ಪ್ರಾಣೇಶ್, ಸುಭಾಶ್ ಹಾಜರಿದ್ದರು.