ಕಾರ್ಕಳ: ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಮಾರಣಾಂತಿಕ ಹಲ್ಲೆ

ಕಾರ್ಕಳ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರೊಬ್ಬರಿಗೆ ಬಜರಂಗದಳದ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಬಜರಂಗದಳದ ನಿಟ್ಟೆ ಗ್ರಾಮದ ಸುನಿಲ್, ಸುಧೀರ್, ಶರತ್, ಪ್ರಸಾದ್, ಜಗದೀಶ್ ಹಲ್ಲೆ ಮಾಡಿದ ಆರೋಪಿಗಳು. ಇವರು ಮಾ. 14ರಂದು ತಡರಾತ್ರಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ನಿಟ್ಟೆ ಗ್ರಾಮದ ಅನಿಲ್ ಪೂಜಾರಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಅನಿಲ್ ಅವರ ತಲೆ ಹಾಗೂ ಮುಖದ ಭಾಗಕ್ಕೆ ಗಾಯವಾಗಿದೆ. ತಕ್ಷಣವೇ ಅವರನ್ನು ಸ್ಥಳೀಯರು ಹಿಂಜಾವೇ ಕಾರ್ಯಕರ್ತರು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಲಾಟೆ ಬಿಡಿಸಲು ಬಂದ ಅನಿಲ್ ಅವರ ತಾಯಿಗೂ ಗಾಯವಾಗಿದ್ದು, ಅವರನ್ನು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ಅನಿಲ್ ಹಾಗೂ ಹಲ್ಲೆ ನಡೆಸಿದ ತಂಡದ ನಡುವೆ ವೈಮನಸ್ಸು ಇತ್ತು ಎನ್ನಲಾಗಿದೆ‌. ಅನಿಲ್ ಅವರು ಈಚೆಗೆ ಬಜರಂಗದಳ ಬಿಟ್ಟು ಜಾಗರಣೆ ವೇದಿಕೆಗೆ ಸೇರ್ಪಡೆಯಾಗಿದ್ದರು. ಇದು ಹಲ್ಲೆಗೆ ಕಾರಣ ಎನ್ನಲಾಗುತ್ತಿದೆ.

ಹಾಗೆ, ಎರಡು ದಿನಗಳ ಹಿಂದೆ ಆನೆಕೆರೆಯಲ್ಲಿ ಹಿಂದೂ ಯುವತಿಯೊಂದಿಗಿದ್ದ ಅನ್ಯಕೋಮಿನ ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ವಿಚಾರವಾಗಿ ಎರಡು ಸಂಘಟನೆಗಳ ಮಧ್ಯೆ ಅಸಮಾಧಾನ ಉಂಟಾಗಿತ್ತು. ಅಲ್ಲದೆ, ಈ ವಿಚಾರ ಎರಡು ಸಂಘಟನೆಗಳ ನಡುವೆ ಪ್ರತಿಷ್ಠೆಯ ಗುದ್ದಾಟಕ್ಕೆ ಕಾರಣವಾಗಿತ್ತು. ಇದುವೇ ಮಾರಾಮಾರಿಗೆ ಕಾರಣ ಎಂದು ಮೂಲಗಳಿಂದ ತಿಳಿದುಬಂದಿದೆ.