ಉಡುಪಿ: ಕಾರ್ಕಳ ತಾಲೂಕಿನ ಪತ್ತೊಂಜಿ ಕಟ್ಟೆ ಎಂಬಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಕಳ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಎ.23ರ ಬೆಳಿಗ್ಗೆಯಿಂದ ಎ.24ರ ಸಂಜೆಯ ಮಧ್ಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಪತ್ತೊಂಜಿಕಟ್ಟೆ ನಿವಾಸಿ ಶಂಕರ ಕುಲಾಲ್ ಎಂಬವರ ಮನೆಯ ಬಾಗಿಲನ್ನು ಒಡೆದು ಒಳನುಗ್ಗಿ, ಕಪಾಟಿನೊಳಗೆ ಇಟ್ಟಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 3 ಗ್ರಾಂ ತೂಕದ ಮೂರು ಉಂಗುರಗಳು, 3 ಗ್ರಾಂ ತೂಕದ ಬೆಂಡೋಲೆ ಹಾಗೂ 3 ಗ್ರಾಂ ತೂಕದ ಜುಮ್ಕಿಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ ರೂ. 2.64 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಕಾರ್ಕಳ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬೈರಂಪಳ್ಳಿ ಗ್ರಾಮದ ಆನಂದ ಕುಲಾಲ್ (40) ಹಾಗೂ ಕಳವು ಮಾಡಿದ ಚಿನ್ನಾಭರಣವನ್ನು ಖರೀದಿಸಿದ ಜಯರಾಮ ಆಚಾರ್ಯ (54) ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು ಸುಮಾರು ರೂ. 5.60 ಲಕ್ಷ ಮೌಲ್ಯದ 39 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

















