ಕಾರ್ಕಳ: ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಪಳ್ಳಿ ಎಂಬಲ್ಲಿ ಮತ್ತೆ ಗೋವು ಕಳ್ಳತನ ನಡೆದಿದೆ.
ಪಳ್ಳಿಯ ಅಶೋಕ್ ನಾಯಕ್ ಎಂಬವರಿಗೆ ಸೇರಿದ ಸುಮಾರು ₹25 ಸಾವಿರ ಮೌಲ್ಯದ ದೇಶಿ ದನವೊಂದನ್ನು ಕಳ್ಳರು ಕದ್ದೊಯ್ದಿದ್ದಾರೆ. ಅಶೋಕ್ ಎಂದಿನಂತೆ ಅ.14ರಂದು ಬೆಳಿಗ್ಗೆ ದನವನ್ನು ಹಟ್ಟಿಯಿಂದ ಮೇಯಲು ಬಿಟ್ಟಿದ್ದರು.
ಆದರೆ ಅಂದು ದನ ಹಟ್ಟಿಗೆ ವಾಪಾಸ್ಸು ಬಂದಿರಲಿಲ್ಲ. ಅಶೋಕ್ ನಾಯಕ್ ಹಾಗೂ ಅವರ ಗೆಳೆಯರು ಪಳ್ಳಿ ಪೇಟೆಯಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಹೀಗಾಗಿ ಅ. 14ರ ಬೆಳಿಗ್ಗೆ 9ರಿಂದ ಅ.16ರ ಬೆಳಿಗ್ಗೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ದನವನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾರಿನಲ್ಲಿ ಕಳವು ಮಾಡಿರುವ ಶಂಕೆ:
ಅ.15ರ 2 ಗಂಟೆ ಸುಮಾರಿಗೆ ರಿಟ್ಜ್ ಕಾರೊಂದು ಪಳ್ಳಿ ಪೆಟ್ರೋಲ್ ಪಂಪ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಸ್ವಲ್ಪ ಸಮಯ ನಿಂತಿದ್ದು, ಬಳಿಕ ಕಾರು ಉಡುಪಿ ಕಡೆಗೆ ತೆರಳಿರುವ ದೃಶ್ಯ ಪೆಟ್ರೋಲ್ ಪಂಪ್ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಅಶೋಕ್ ನಾಯಕ್ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.