ಕಾರ್ಕಳದಲ್ಲಿ ಆಳ್ವಾಸ್ ನುಡಿಸಿರಿ–ವಿರಾಸತ್ ಅದ್ಧೂರಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ, ಸಾವಿರಾರು ಜನರನ್ನು ರಂಜಿಸಿದ ಸಾಂಸ್ಕೃತಿಕ ವೈವಿಧ್ಯ

ಕಾರ್ಕಳ: ಎಲ್ಲಾ ರಂಗದಲ್ಲಿ ಮೋಹನ ಆಳ್ವರಿಗೆ ಸರಿಸಮರಾದ  ವ್ಯಕ್ತಿಯಿಲ್ಲ.ಜನರಿಗೆ ಹತ್ತಿರಾಗಿರುವಂತಹ ಜೀವ ಅವರದ್ದು, ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರಷ್ಟು ಮಾದರಿಯಾದ ವ್ಯಕ್ತಿತ್ವ ಎಲ್ಲಿಯೂ ಇಲ್ಲ ಎಂದು ಖ್ಯಾತ ಉದ್ಯಮಿ ಬರೋಡಾ ಶಶಿಧರ ಶೆಟ್ಟಿ ಹೇಳಿದರು.

ಆಳ್ವಾಸ್ ನುಡಿಸಿರಿ–ವಿರಾಸತ್ ಕಾರ್ಕಳ ಘಟಕದ ಆಶ್ರಯದಲ್ಲಿ ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ಶನಿವಾರ ಆಯೋಜಿಸಿದ ಕಾರ್ಕಳದಲ್ಲಿ ಆಳ್ವಾಸ್ ನುಡಿಸಿರಿ–ವಿರಾಸತ್ ಅದ್ಧೂರಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮೋಹನ ಆಳ್ವರು, ನಷ್ಟವಾದರೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಲ್ಲಿಸಲಿಲ್ಲ‌.ಇದು ಅವರ ಬದ್ದತೆಯನ್ನು ತೋರಿಸುತ್ತದೆ ಎಂದರು. ಆಳ್ವಾಸ್ ಸಂಸ್ಥೆ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಿದ್ದು ಆ ಕಾಲೇಜು ಕರ್ನಾಟಕದಲ್ಲಿ ದೊಡ್ಡ ಮಟ್ಟದ  ಹೆಸರು ಮಾಡಲಿ ಎಂದರು.

ಶ್ರೀಮಂತ ಸಂಸ್ಕೃತಿಯನ್ನು ದಾಟಿಸುವ ಪ್ರಯತ್ನ;ಸುನಿಲ್ ಕುಮಾರ್

ಕಾರ್ಕಳ ಶಾಸಕರಾದ ವಿ ಸುನೀಲ್ ಕುಮಾರ್ ಮಾತನಾಡಿ, ಇದು ಬರೀ ಮನೋರಂಜನೆಯ ಕಾರ್ಯಕ್ರಮ ಅಲ್ಲ. ಈ ಕಾರ್ಯಕ್ರಮದಲ್ಲಿ ಸಮಾಜಕ್ಕೊಂದು ಸಂದೇಶವಿದೆ. ದೇಶದ ಉದ್ದಗಲಕ್ಕೂ ಪಯಣ ಮಾಡಿದಾಗ ನಮ್ಮ ಸಾಂಸ್ಕೃತಿಕ ಬೇರುಗಳು ಎಷ್ಟು ಹಬ್ಬಿದೆ ಎನ್ನುವುದು ಗೊತ್ತಾಗುತ್ತದೆ. ಸಾಂಸ್ಕೃತಿಕವಾಗಿ ನಾವು ಶ್ರೀಮಂತವಾಗಿದ್ದೇವೆ. ಆಳ್ವಾಸ್ ಕಾಲೇಜು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ವಿಚಾರ,  ನಾಡಿನ ಸಾಂಸ್ಕೃತಿಕ ಕಲೆ ಮತ್ತು ಸಂಸ್ಕೃತಿಯನ್ನು ನಾಡಿನಾದ್ಯಂತ ಹಬ್ಬಿಸುವ ಸಂಸ್ಥೆಯ ಸಾಧನೆ ಮಹತ್ವದ್ದು ಎಂದರು.

ಆಳ್ವಾಸ್ ಸಂಸ್ಥೆ ಮಿನಿ ಇಂಡಿಯಾ ಆಗಬೇಕು: ಮೋಹನ್ ಆಳ್ವ

ನುಡಿಸಿರಿ ವಿರಾಸತ್ ನ್ನು ಬಿಟ್ಟು ಆಲೋಚನೆ ಮಾಡಲು ನನಗೆ ಸಾಧ್ಯವಿಲ್ಲ. ಭಾರತದಾದ್ಯಂತ ನುಡಿಸಿರಿ  ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿರಾಸತ್  ಸದ್ದು ಮಾಡಿದೆ. ನಾಡಿನ 88 ಕಡೆಗಳಲ್ಲಿ ಆಳ್ವಾಸ್ ಘಟಕಗಳನ್ನು ಮಾಡಿದೆವು. ರಾಜ್ಯ ಬಿಟ್ಟು ಹೊರ ರಾಜ್ಯಗಳಲ್ಲಿಯೂ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ಕೊಟ್ಟಿದೆ. ಈ ಫೆಬ್ರವರಿ ಒಳಗೆ 50 ಕಡೆಗಳಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮ ನಿಗಧಿಯಾಗಿದೆ. ಜಾತಿ ಮತ ಧರ್ಮದ ಅಂತರವನ್ನು ಮೀರಿ ಕಾರ್ಯಕ್ರಮಗಳನ್ನು ಮಾಡ್ತಾ ಇದ್ದೇವೆ. ದೇಶಿಯ ಚಿಂತನೆ ಮತ್ತು ಬಹುತ್ವಕ್ಕಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಟ್ಟಾಗುತ್ತಾರೆ. ಆಳ್ವಾಸ್ ಸಂಸ್ಥೆ ಮಿನಿ ಇಂಡಿಯಾ ಆಗಬೇಕು ಎನ್ನುವುದು ನನ್ನ ಆಶಯ ಎಂದರು. ಯುವಶಕ್ತಿಗೆ ಬೆಲೆ ಕೊಡೋಣ. ದೇಶದಲ್ಲಿ  52 ಕೋಟಿ ಯುವಶಕ್ತಿ ಇದೆ. ಈ ವಿದ್ಯಾರ್ಥಿಗಳಿಗೆ ಸುಂದರವಾದ ಮನಸ್ಸನ್ನು ಕಟ್ಟುವ ಅನಿವಾರ್ಯತೆಯಿದೆ. ಕಲಿಕೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳು, ಸಾಂಸ್ಕೃತಿಕ, ವಿಕಲಚೇತನ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ  ಶಿಕ್ಷಣ ಕೊಡುತ್ತಿದ್ದೇವೆ ಎಂದರು. ವೇದಿಕೆಯಲ್ಲಿ ವಿವಿಧ ರಂಗದ ತಾಲೂಕಿನ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.  ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಂದಿಸಿದರು.

ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಹೆಚ್ಚು ವಿದ್ಯಾರ್ಥಿ ಕಲಾವಿದರು ವಿವಿಧ ಭಾರತೀಯ ಕಲಾ ಪ್ರಕಾರಗಳ ಮನಮೋಹಕ ಪ್ರದರ್ಶನ ನೀಡಿದರು. ಯೋಗ ದೀಪಿಕಾ, ಅಷ್ಟಲಕ್ಷ್ಮಿ ಶಾಸ್ತ್ರೀಯ ನೃತ್ಯ, ಬಡಗುತಿಟ್ಟು ಯಕ್ಷಗಾನ ‘ಶಂಕರಾರ್ಧ ಶರೀರಿಣಿ’, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲಕಂಬ ಹಾಗೂ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ‘ಹಿರಣ್ಯಾಕ್ಷ ವಧೆ’, ಬೊಂಬೆ ವಿನೋದಾವಳಿ ಸೇರಿದಂತೆ ಅನೇಕ ವೈವಿಧ್ಯಮಯ ಕಲಾರೂಪಗಳು ವೇದಿಕೆಯನ್ನು ಅಲಂಕರಿಸಿದವು.
ಆಳ್ವಾಸ್ ವಿದ್ಯಾರ್ಥಿಗಳ ಸಿಂಗಾರಿ ಮೇಳ ಪ್ಯೂಷನ್ ವಿನೋದಾವಳಿ, ಆಕರ್ಷಕ ಬೊಂಬೆ ಸಿಡಿಮದ್ದಿನ ಪ್ರದರ್ಶನವು ಪ್ರೇಕ್ಷಕರ ಗಮನ ಸೆಳೆಯಿತು.