ಕಾರ್ಕಳ: ಮಾಟ ಮಂತ್ರ, ನಾಗದೋಷದ ನಂಬಿಕೆ ಹುಟ್ಟಿಸಿ ವ್ಯಕ್ತಿಯಿಂದ ₹30 ಲಕ್ಷ ದೋಚಿದ ವಂಚಕಿ.!

ಕಾರ್ಕಳ: ಮಾಟ ಮಂತ್ರ, ನಾಗದೋಷದ ನಂಬಿಕೆ ಹುಟ್ಟಿಸಿ ವ್ಯಕ್ತಿಯೊಬ್ಬರಿಗೆ ವಂಚಕಿಯೊಬ್ಬಳು ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯೂರು ಗ್ರಾಮದಲ್ಲಿ ನಡೆದಿದೆ.

ಕಾರ್ಕಳ ತಾಲೂಕಿನ ಮಿಯ್ಯೂರು ಗ್ರಾಮದ ಮಂಜಡ್ಕ ಮನೆಯ ನಿವಾಸಿ ಲೋಯ್‌ ಮಚಾದೋ (36) ವಂಚನೆಗೆ ಒಳಗಾದವರು. ಸುನೀತಾ ಮೆಂಡೋನ್ಸಾ ಎಂಬಾಕೆ ಲಕ್ಷಾಂತರ ಲಪಟಾಯಿಸಿದ ವಂಚಕಿ.

ಲೋಯ್ ಮಚಾದೋ ಅವರಿಗೆ 2014ರಲ್ಲಿ ತಮ್ಮನ ಮೂಲಕ ಸುನೀತಾಳ ಪರಿಚಯವಾಗಿತ್ತು. ಈಕೆ ಕಾಯಿಲೆಯಿಂದ ಬಳಲುತ್ತಿದ್ದು, ಹೀಗಾಗಿ ಲೋಯ್ ಮಚಾದೋ ಮಾನವೀಯತೆಯಿಂದ ಮಕ್ಳಳ ಜತೆಗೆ ಮನೆಗೆ ಕರೆದುಕೊಂಡು ಬಂದಿದ್ದರು. ಕೆಲ ಸಮಯದ ಬಳಿಕ ವಿದೇಶದಲ್ಲಿದ್ದ ಈಕೆಯ ಪತಿಯು ಆಕೆಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಅಲ್ಲಿ ಕೆಲಸ ಸರಿ ಇಲ್ಲವೆಂದು ಇಬ್ಬರು ಊರಿಗೆ ಮರಳಿದ್ದರು.

2016ರಲ್ಲಿ ತಮ್ಮನ ಮದುವೆ ಹಿನ್ನೆಲೆಯಲ್ಲಿ ಮಚಾದೋ ಊರಿಗೆ ಬಂದಿದ್ದರು. ಆಗ ಇವರನ್ನು ಸುನೀತಾ ತನ್ನ ಮನೆಗೆ ಭೋಜನಕ್ಕೆ ಕರೆದಿದ್ದರು. ಆಗ ಮಚಾದೋ ಬಳಿ ನನ್ನ ಖಾಯಿಲೆ ವಾಸಿ ಆಗಿದೆ. ಗುರುಗಳೊಬ್ಬರು 25 ಸಾವಿರ ಹಣ ಪಡೆದು ಖಾಯಿಲೆ ವಾಸಿ ಮಾಡಿದ್ದಾರೆ ಎಂದು ಹೇಳಿದ್ದಾಳೆ. ಹಾಗೆ ನಿನ್ನ ಮನೆಯಲ್ಲಿ ನಾಗದೋಷ, ಹುಡುಗಿಯ ದೋಷ, ಯಾರೋ ಮಾಟ ಮಾಡಿದ್ದಾರೆ. ಈ ಸಮಸ್ಯೆಗಳನ್ನು ಗುರುಗಳ ಬಳಿ ಪ್ರಾರ್ಥನೆ ಮಾಡಲು ಹೇಳಿ ಸರಿಪಡಿಸುತ್ತೇನೆಂದು ಮಚಾದೋಗೆ ಭರವಸೆ ಕೊಟ್ಟಿದ್ದಳು.

ಗುರುಗಳ ಬಗ್ಗೆ ಕೇಳಿದಾಗ ಅವರ ಸಂಪರ್ಕ ಮಾಡಲು ಆಗುವುದಿಲ್ಲ. ಹಾಗೆ ಆದಲ್ಲಿ ನಿನಗೆ ಹೆಚ್ಚು ತೊಂದರೆ ಆಗುತ್ತದೆ. ಪ್ರಾರ್ಥನೆ ಫಲಿಸುವುದಿಲ್ಲವೆಂದು ನಂಬಿಸಿದ್ದಳು. ಹೀಗೆ ಗುರುಗಳಿಗೆ ಹಣವನ್ನು ಕೊಡಬೇಕೆಂದು ಮಚಾದೋ ಬಳಿ ಹಂತ ಹಂತವಾಗಿ ಹಣವನ್ನು ಪಡೆದುಕೊಂಡಿದ್ದಳು.

ಬಳಿಕ ಮಚಾದೋಗೆ ಮದುವೆ ಆಗುವ ವಿಷಯವನ್ನು ಅರಿತುಕೊಂಡ ಸುನೀತಾ, ನಿನಗೆ ಒಳ್ಳೆಯ ಜೀವನ ಸಂಗಾತಿ ಸಿಗಬೇಕಾದರೆ ಗುರುಗಳಿಂದ ಪ್ರಾರ್ಥನೆ ಮಾಡಿಸಬೇಕು. ತುಂಬಾ ಹಣ ಖರ್ಚು ಆಗುತ್ತದೆ. ಹಣ ಕೊಡದಿದ್ದರೆ ನಿನ್ನ ಮದುವೆಯು ಖಂಡಿತ ಆಗುವುದಿಲ್ಲ ಎಂದು ಮತ್ತೆ ಹಣ ಪಡೆದುಕೊಂಡಿದ್ದಳು.

2015ರಲ್ಲಿ ಮಚಾದೋ ಅವರಿಗೆ ಮದುವೆಯಾಗಿದ್ದು, ಆ ಬಳಿಕ ಪೋನ್‌ಮಾಡಿದ ವಂಚಕಿ ಸುನೀತಾ ನಿನ್ನ ತಮ್ಮನ ಹೆಂಡತಿ ಮಾಟ ಮಂತ್ರ ಮಾಡಿ ಮದ್ದು ಹಾಕಿದ್ದಾಳೆ. ನಮ್ಮಿಬ್ಬರ ಜೀವ ಅಪಾಯದಲ್ಲಿದೆ. ನಿನ್ನ ಮನೆಯವರು ಸಾಯುತ್ತಾರೆ. ಗುರುಗಳಲ್ಲಿ ಪ್ರಾರ್ಥನೆ ಮಾಡಿದರೆ ಸರಿಯಾಗುತ್ತದೆ ಎಂದು ನಂಬಿಸಿ ಮತ್ತೆ ಹಣ ಪೀಕಿದ್ದಾಳೆ.

ಹೀಗೆ ಮಚಾದೋ ಅವರು, ಹೆಂಡತಿಯ ಮಾಂಗಲ್ಯ ಸರ ಸೇರಿದಂತೆ ಹಂತ ಹಂತವಾಗಿ ಹತ್ತು ಲಕ್ಷ ಕೊಟ್ಟಿದ್ದರು. ಸ್ನೇಹಿತರು ಹಾಗೂ ಅಣ್ಣನ ಬಳಿಯಿಂದ ಹಣ ಪಡೆದು ಒಟ್ಟು ₹ 30ಲಕ್ಷ ರೂ. ಸುನೀತಾಳಿಗೆ ನೀಡಿದ್ದೇನೆ. ಆದರೆ ಆಕೆ ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾಳೆ ಎಂದು ಮಚಾದೋ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.