ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ದೀಪಾವಳಿ ಪಾರ್ಟಿಯಲ್ಲಿ ಧರಿಸಿದ್ದ ಪೆಂಡೆಂಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಸುಮಾರು 200 ವರ್ಷಗಳಷ್ಟು ಹಳೆಯದಾದ ಈ ಆಭರಣದಲ್ಲಿ ಪವಿತ್ರ ಕುರಾನ್ನ ಆಯತುಲ್ ಕುರ್ಸಿ ವಚನ ಕೆತ್ತಲಾಗಿದೆ ಎನ್ನಲಾಗಿದ್ದು, ಅದನ್ನು ಫ್ಯಾಷನ್ ಆಭರಣವಾಗಿ ಧರಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಈ ಸಂಬಂಧ ಕಾಂಗ್ರೆಸ್ ನಾಯಕ ಅಬ್ಬಾಸ್ ಹಫೀಜ್ ಅವರು ಕರೀನಾ ಕಪೂರ್ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಮುಸ್ಲಿಂ ಸಮುದಾಯದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಕುರಾನ್ನ ವಚನಗಳು ಮುಸ್ಲಿಮರಿಗೆ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಮಹತ್ವವನ್ನು ಹೊಂದಿವೆ. ಅವುಗಳನ್ನು ಗೌರವದಿಂದ ಕಾಣಬೇಕು. ಕೆಲವರು ಧಾರ್ಮಿಕ ಶುದ್ಧೀಕರಣ ಪ್ರಕ್ರಿಯೆಯಾದ ವುಡು ಮಾಡದೆ ಕುರಾನ್ನ ವಚನಗಳನ್ನು ಮುಟ್ಟುವುದನ್ನೂ ತಪ್ಪಿಸುತ್ತಾರೆ ಎಂದು ಅಬ್ಬಾಸ್ ಹಫೀಜ್ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಮ್ಮ ಕ್ರಮಕ್ಕೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿರುವ ಹಫೀಜ್, ಕಾಂಗ್ರೆಸ್ ನಾಯಕನಾಗಿ ಈ ನೋಟಿಸ್ ನೀಡಿಲ್ಲ. ಬದಲಾಗಿ ಮುಸ್ಲಿಂ ಸಮುದಾಯದೊಂದಿಗಿನ ಸಂಬಂಧ ಹಾಗೂ ಧಾರ್ಮಿಕ ಭಾವನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಸ್ಟೈಲಿಸ್ಟ್ ರಿಯಾ ಕಪೂರ್ ಸ್ಪಷ್ಟನೆ
ಈ ವಿವಾದದ ಬೆನ್ನಲ್ಲೇ ಕರೀನಾ ಅವರ ಸ್ಟೈಲಿಸ್ಟ್ ರಿಯಾ ಕಪೂರ್ ಅವರು ಇನ್ಸ್ಟಾಗ್ರಾಂನಲ್ಲಿ ಆಭರಣಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ. ದೀಪಾವಳಿ ಪಾರ್ಟಿಯಲ್ಲಿ ಕರೀನಾ ಬೆಳ್ಳಿ ಕಫ್ತಾನ್ ಹಾಗೂ ಪೇಟ ಧರಿಸಿದ್ದ ಫೋಟೋಗಳನ್ನು ರಿಯಾ ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ವಿವಾದಕ್ಕೆ ಕಾರಣವಾಗಿರುವ ಪೆಂಡೆಂಟ್ ಕೂಡ ಕಾಣಿಸಿಕೊಂಡಿತ್ತು.
ರಿಯಾ ಅವರ ಪ್ರಕಾರ, ಕರೀನಾ ಧರಿಸಿದ್ದ ಆಭರಣಗಳು ಭೋಪಾಲ್ ರಾಜಮನೆತನದ ಪಾರಂಪರಿಕ ವಿನ್ಯಾಸಕ್ಕೆ ಸೇರಿವೆ. ಸುಮಾರು 200 ವರ್ಷಗಳಷ್ಟು ಹಳೆಯದಾದ ಭೋಪಾಲ್ ನವಾಬರ ಕಲ್ಗಿ ಹಾಗೂ 30 ಕ್ಯಾರೆಟ್ ಪಚ್ಚೆಯೊಂದಿಗೆ ಆಯತುಲ್ ಕುರ್ಸಿ ವಚನ ಕೆತ್ತಿರುವ ಆಭರಣವನ್ನು ಅವರು ಪ್ರದರ್ಶಿಸಿದ್ದಾರೆ.
ಈ ಆಭರಣಗಳು ಕರೀನಾ ಅವರ ಸ್ವಂತ ಸಂಗ್ರಹದಲ್ಲಿದ್ದು, ಸೈಫ್ ಅಲಿ ಖಾನ್ ಅವರ ಕುಟುಂಬದ ಮೂಲಕ ಬಂದಿವೆ. ಸೈಫ್ ಅವರ ಅಜ್ಜಿ ಸಾಜಿದಾ ಸುಲ್ತಾನ್ ಅವರು ಭೋಪಾಲ್ನ ಕೊನೆಯ ಆಡಳಿತ ನವಾಬನ ಪುತ್ರಿ ಎಂಬುದನ್ನೂ ರಿಯಾ ತಮ್ಮ ಪೋಸ್ಟ್ನಲ್ಲಿ ವಿವರಿಸಿದ್ದಾರೆ.















