ಕಾಪು ಮಾರಿ ಪೂಜೆ: ಮದ್ಯ ನಿಷೇಧ ಆದೇಶ ಹಿಂಪಡೆದ ಡಿಸಿ

ಉಡುಪಿ: ಕಾಪುವಿನ ಮೂರು ಮಾರಿಗುಡಿಗಳಲ್ಲಿ ಮಾರ್ಚ್ 23 ಮತ್ತು 24ರಂದು ಸುಗ್ಗಿ ಮಾರಿ ಪೂಜೆ ನಡೆಯುವ ಹಿನ್ನೆಲೆಯಲ್ಲಿ ಕಾಪು ಠಾಣಾ ವ್ಯಾಪ್ತಿಯ ಕಾಪು ಪಡು, ಮೂಳೂರು, ಮಜೂರು ಗ್ರಾಮಗಳಲ್ಲಿ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಹಿಂಪಡೆದಿದ್ದಾರೆ.

ಈವರೆಗೆ ಸುಗ್ಗಿ ಮಾರಿ ಪೂಜೆ ದಿನದಂದು (ಎರಡು ದಿನ) ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಹಾಗೂ ಸಾರ್ವಜನಿಕರ ಶಾಂತಿ ಭಂಗ ಪ್ರಕರಣಗಳು ದಾಖಲಾಗಿಲ್ಲ. ಅಲ್ಲದೆ, ಮಾರಿ ಪೂಜೆ ದಿನದಂದು ಈವರೆಗೆ ಮದ್ಯ ಮಾರಾಟ ನಿಷೇಧವಾಗಿಲ್ಲ. ಅಲ್ಲದೆ ಕಳೆದೊಂದು ವರ್ಷದಿಂದ ಕೊರೊನಾ ಮಹಾಮಾರಿಯಿಂದ ಸನ್ನದುದಾರರಿಗೆ ಬಹಳಷ್ಟು ನಷ್ಟ ಉಂಟಾಗಿದೆ. ಹಾಗಾಗಿ ಮಾ. 23 ಮತ್ತು 24 ರಂದು ಯಥಾಸ್ಥಿತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೋರಿ ಕಾಪು ಠಾಣಾ ವ್ಯಾಪ್ತಿಯ ಗ್ರಾಮಗಳ ಮದ್ಯ ಮಾರಾಟದ ಸನ್ನದುದಾರರು ಠಾಣೆಗೆ ಹಾಜರಾಗಿ ಮನವಿ ಸಲ್ಲಿಸಿದ್ದರು.

ಈ ಬಗ್ಗೆ ಪರಿಶೀಲನೆ ನಡೆಸಿ ಈವರೆಗೆ ಮಾರಿ ಪೂಜೆದಿನದಂದು ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಶಾಂತಿಗೆ ಭಂಗ ಪ್ರಕರಣಗಳು ದಾಖಲಾಗದೆ ಇರುವುದರಿಂದ ಮತ್ತು ಸನ್ನದುದಾರರು ಮದ್ಯ ನಿಷೇಧ ಆದೇಶದಲ್ಲಿ ಸಡಿಲಿಕೆ ಮಾಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮದ್ಯ ಮಾರಾಟ ನಿಷೇಧ ಆದೇಶವನ್ನು ವಾಪಾಸು ಪಡೆದಿದ್ದಾರೆ. ಹಾಗಾಗಿ ಕಾಪು ಪಡು, ಮೂಳೂರು, ಮಜೂರು ಗ್ರಾಮಗಳ ವ್ಯಾಪ್ತಿಯ ಬಾರ್ ಹಾಗೂ ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಗಳಲ್ಲಿ ಎಂದಿನಂತೆ ಮದ್ಯ ಮಾರಾಟ ನಡೆಯಲಿದೆ.