ಬಜರಂಗದಳ, ಆರ್.ಎಸ್.ಎಸ್ ಬ್ಯಾನ್ ಮಾಡುತ್ತೇವೆ ಎಂದ ಪ್ರಿಯಾಂಕ್ ಖರ್ಗೆ ವಿರುದ್ಧ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್ ವಾಗ್ದಾಳಿ

ಕಾಪು: ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕ್ ಖರ್ಗೆ, ಪಕ್ಷ ಚುನಾವಣೆ ಗೆದ್ದ ಅಮಲಿನಲ್ಲಿ ಬಜರಂಗ ದಳದ ಒಟ್ಟಿಗೆ ಆರ್ ಎಸ್ ಎಸ್ ನ್ನೂ ಬ್ಯಾನ್ ಮಾಡುತ್ತೇವೆ ಎನ್ನುವ ಮೂರ್ಖತನದ ಹೇಳಿಕೆ ನೀಡಿದ್ದು ಇದು ಖಂಡನೀಯ ಎಂದು ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಹೇಳಿದ್ದಾರೆ.

ಬಜರಂಗದಳ ಆರ್.ಎಸ್.ಎಸ್ ಇವೆರಡನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇದೆಯೇ ಎನ್ನುವುದನ್ನು ಮೊದಲಿಗೆ ಸರಿಯಾಗಿ ಅಧ್ಯಯನ ಮಾಡಿಲಿ, ನಂತರ ಹೇಳಿಕೆ ಕೊಡಲಿ.

ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಇಷ್ಟೂ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲವೇ ಇವರಿಗೆ, ಅಲ್ಲದೆ ಆರ್ ಎಸ್ ಎಸ್, ಬಜರಂಗದಳ ಎಂದಿಗೂ ದೇಶವಿರೋಧಿ ಚಟುವಟಿಕೆ ಮಾಡಿಲ್ಲ. ಭಯೋತ್ಪಾದನೆ ಮಾಡಿಲ್ಲ. ದೇಶ ಮೊದಲು ಎನ್ನುವ ಚಿಂತನೆಗಳೊಂದಿಗೆ ಸಮಾಜದ ಸಂಘಟನೆ ಮಾಡುತ್ತಿರುವ ದೇಶಪ್ರೇಮಿ ಸಂಘಟನೆಗಳು ಇವು. ದೇಶಪ್ರೇಮ ಮಾಡುವುದೇ ಅಪರಾಧವಾದರೆ ನಿಷೇಧ ಮಾಡುವ ಪ್ರಯತ್ನ ಮಾಡಿ ನೋಡಲಿ. ಆವಾಗ ತಿಳಿಯುತ್ತೆ ಇವರಿಗೆ ಹಿಂದೂ ಸಮಾಜದ ಶಕ್ತಿ ಸಾಮರ್ಥ್ಯದ ಬಗ್ಗೆ, ಸುಮ್ಮನೆ ಕೊಡಲಾಗದ ಗ್ಯಾರಂಟಿಗಳನ್ನು ಹೇಳಿಕೊಂಡು ಚುನಾವಣೆ ಗೆದ್ದು, ಇದೀಗ ಆ ಭರವಸೆಗಳನ್ನು ಈಡೇರಿಸಲಾಗದೆ ಬೇರೆ ಕಡೆ ವಿಷಯಾಂತರಿಸಿದರೆ ಜನ ಇದನ್ನು ಮರೆತಾರು ಎನ್ನುವ ಆಲೋಚನೆಯಲ್ಲಿ ಇಂತಹ ಹೇಳಿಕೆ ನೀಡುತ್ತಿದ್ದಾರೆ.‌

ನಿಮ್ಮ ಹೇಳಿಕೆಗಳನ್ನು ಜನ ಗಮನಿಸುತ್ತಿದ್ದಾರೆ. ಮೊದಲ ಸಂಪುಟದಲ್ಲಿಯೇ ಎಲ್ಲ ಗ್ಯಾರಂಟಿಗಳನ್ನು ನೀಡುತ್ತೇವೆ, 24 ಗಂಟೆಯೊಳಗೆ ಹಾಗೆ ಹೀಗೆ ಎಂದು ಪುಂಗಿ ಬಾರಿಸಿ ಇದೀಗ ನುಣುಚಿಕೊಳ್ಳುವ ಪ್ರಯತ್ನ ಬೇಡ. ಅಧಿಕಾರಕ್ಕಾಗಿ, ಮಂತ್ರಿಗಿರಿಗಾಗಿ ನಿಮ್ಮ ಕಚ್ಚಾಟ, ದೊಂಬರಾಟ ನೋಡಿ ಜನ ನಗುತ್ತಿದ್ದಾರೆ.

ನೀವು ಮೊದಲು ಹೇಳಿದುದನ್ನು ಮಾಡಿ ತೋರಿಸಿ. ಅದನ್ನು ಮಾಡದೆ ಭಾವನೆಗಳ ಮೇಲೆ ಚೆಲ್ಲಾಟವಾಡಿದರೆ ಪರಿಣಾಮ ಗಂಭೀರವಾದೀತು ಎಂದು ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.