ಕಾಪು: ಟ್ಯೂಬ್‌ನ ಸಹಾಯದಿಂದ ಬಲೆ ಹಾಕಿ ಮೀನುಗಾರಿಕೆ ಮಾಡಲು ತೆರಳಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಸಮುದ್ರದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕಾಪು ತಾಲೂಕಿನ ಪೊಲಿಪು ಪಡುಗ್ರಾಮ ಎಂಬಲ್ಲಿ ನಡೆದಿದೆ.
ಮೃತರನ್ನು ಪೊಲಿಪು ಪಡುಗ್ರಾಮದ ಲಕ್ಷ್ಮೀನಾರಾಯಣ ಭಜನಾ ಮಂದಿರ ಬಳಿಯ ನಿವಾಸಿ ಮನೋಜ್ (45) ಎಂದು ಗುರುತಿಸಲಾಗಿದೆ.
ಇವರು ಫೆ. 20ರಂದು ಮಧ್ಯಾಹ್ನ 2.45ಕ್ಕೆ ಸುಮಾರಿಗೆ ಮನೆಯಿಂದ ಟ್ಯೂಬ್‌ನಲ್ಲಿ ಬಲೆ ಕಟ್ಟಿಕೊಂಡು ಮೀನುಗಾರಿಕೆಗೆ ಹೋಗಿದ್ದರು.
ಕಾಪು ಲೈಟ್ ಹೌಸ್‌ನ ಹತ್ತಿರ ಸಮುದ್ರಕ್ಕೆ ಇಳಿದವರು ಮತ್ತೆ ವಾಪಾಸ್ ಬಂದಿರಲಿಲ್ಲ. ಮರುದಿನ ಅಂದರೆ ಫೆ. 21ರಂದು ಮಧ್ಯಾಹ್ನ 1.15ಕ್ಕೆ ಪೊಲಿಪು ಪಡು ಲಕ್ಷ್ಮೀನಾರಾಯಣ ಭಜನಾ ಮಂದಿರದ ಬಳಿಯ ಸಮುದ್ರ ತೀರದಲ್ಲಿ ಮನೋಜ್ ಅವರ ಮೃತದೇಹ ಸಿಕ್ಕಿತ್ತು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.