ಧಾರವಾಡ ; ‘ಕನ್ನಡವನ್ನು ನಾವು ಉಳಿಸಬೇಕು ಎಂಬ ಮನಸ್ಥಿತಿಯಿಂದ ಕನ್ನಡದಿಂದ ನಾವು ಉಳಿಯಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಲಿ.’ ಇದು 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ಕನ್ನಡ ಶಾಲೆಗಳ ಅಳಿವು-ಉಳಿವು ವಿಚಾರಗೋಷ್ಠಿಯ ತಿರುಳು.
ಸ್ವತಃ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರ ಹಾಗೂ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಪಾಟೀಲ ಅವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಈ ವಿಚಾರಗೋಷ್ಠಿ ಮಹತ್ವ ಪಡೆದಿತ್ತು.
ಮಾತೃಭಾಷೆಯ ಶಿಕ್ಷಣ ಆಯ್ಕೆಯಾಗದೇ ಅನಿವಾರ್ಯವಾಗಿಸಲು ಸರ್ಕಾರ ದಿಟ್ಟಹೆಜ್ಜೆ ಇಡಬೇಕು. ಕನ್ನಡದಲ್ಲಿ ಶಿಕ್ಷಣ ನೀಡುವ ಬಗ್ಗೆ ಪಾಲಕರಲ್ಲಿ ಅರಿವು, ಮನವೊಲಿಸುವ ಕಾರ್ಯ ಆಗಬೇಕು. ಆರ್‌ಟಿಇಯ ಅನುದಾನವನ್ನು ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಬೋಧನೆಗೆ ಶಿಕ್ಷಕರ ನೇಮಕ ಹಾಗೂ ಮೂಲಸೌಲಭ್ಯ ಕಲ್ಪಿಸಲು ಮೀಸಲಿಡಬೇಕು ಎಂಬ ಒತ್ತಾಯವನ್ನು ಗೋಷ್ಠಿಯಲ್ಲಿ ವಿಚಾರ ಮಂಡಿಸಿದ ಶಿಕ್ಷಣ ತಜ್ಞರು ಸರ್ಕಾರದ ಮುಂದಿಟ್ಟರು.
ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡ ಶಾಲೆಗಳಿಗೆ ಶಿಕ್ಷಕರಿಂದಲೂ ದ್ರೋಹ
ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ಶೇ.25ರಷ್ಟು ಅಧ್ಯಾಪಕರು ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದರೆ, ಶಾಲೆಗೆ ಬಂದೂ ಪಾಠ ಮಾಡದ ಅಧ್ಯಾಪಕರ ಪ್ರಮಾಣ ಶೇ.56.1ರಷ್ಟಿದೆ. ಆದರೆ, ಇವರೆಲ್ಲರೂ ನಿಯಮಿತವಾಗಿ ಸಂಬಳ ಪಡೆಯುತ್ತಿದ್ದಾರೆ!
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಪ್ರೊ. ಜಿ. ಎಸ್. ಜಯದೇವ್ ಅವರು ಮುಂದಿಟ್ಟ ಅಧ್ಯಯನ ವರದಿಯೊಂದರ ಈ ಮಾಹಿತಿ ಬೆರಳೆಣಿಕೆ ಸಂಖ್ಯೆಯ ಸಭಿಕರನ್ನು ಬೆಚ್ಚಿಬೀಳಿಸಿತು.
ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣಗೊಳ್ಳಬೇಕು ಎಂಬುದರ ಸಮರ್ಥಕ ಕಂಬಾರರ ಸಮ್ಮುಖದಲ್ಲಿ ‘ಸರಕಾರಿ ಶಾಲೆಗಳ ಅಳಿವು-ಉಳಿವು’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ತಜ್ಞ, ಚಾಮರಾಜನಗರದ ಜಯದೇವ್, ಸರಕಾರಿ ಶಾಲೆಗಳ ದೌರ್ಬಲ್ಯಗಳಿಗೆ ಸಾಣೆ ಹಿಡಿದರು. ಸರಕಾರಿ ಶಾಲೆಗಳಿಂದ ಪಾಲಕರೇಕೆ ದೂರ ಸರಿಯುತ್ತಿದ್ದಾರೆ ಎಂಬ ಪ್ರಶ್ನೆಗೆ ಅವರು ಉತ್ತರ ಅರಸಿದರು.