ಸ್ಯಾಂಡಲ್ ವುಡ್ ನ ಖ್ಯಾತ ಯುವ ನಿರ್ದೇಶಕ ಇನ್ನಿಲ್ಲ

ಬೆಂಗಳೂರು: ಕಂಠಿ, ಸಾಹೇಬ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರತಿಭಾವಂತ ಯುವ ನಿರ್ದೇಶಕ ಎಸ್. ಭರತ್ (45) ವಿಧಿವಶರಾಗಿದ್ದಾರೆ.

ಭರತ್‌ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇದಕ್ಕೆ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಭರತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಶ್ರೀಮುರಳಿ, ರಮ್ಯಾ ನಟಿಸಿದ್ದ ಕಂಠಿ ಸಿನಿಮಾವನ್ನು ನಿರ್ದೇಶಿಸಿದ್ದ ಭರತ್ ಆ ನಂತರ ಬಹು ವರ್ಷಗಳ ಬಿಡುವಿನ ಬಳಿಕ 2017 ರಲ್ಲಿ ಸಾಹೇಬ ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾ ಒಂದನ್ನೇ ವೃತ್ತಿ ಮಾಡಿಕೊಂಡಿದ್ದ ಭರತ್, ಹೊಸ ಸಿನಿಮಾದ ತಯಾರಿಯಲ್ಲಿದ್ದಾಗಲೇ ವಿಧಿವಶರಾಗಿದ್ದಾರೆ.

ಭರತ್​ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಇನ್ನು ಯುವ ನಿರ್ದೇಶಕನ ಅಕಾಲಿಕ ಮರಣಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನ ಮಿಡಿದಿದ್ದಾರೆ.