ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರರಲ್ಲಿ ಯಾವತ್ತಿಗೂ ಒಂದು ವಿಶೇಷ ಪ್ರೀತಿ ಜಾರಿಯಲ್ಲಿರುತ್ತೆ. ಇದೀಗ ಅದೇ ಸೊಗಡಿನ ಪಕ್ಕಾ ರಗಡ್ ಕಥಾನಕ ಹೊಂದಿರೋ ಚಿತ್ರವೊಂದು ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಜಾನರಿನ ಈ ಸಿನಿಮಾಗೆ ಕಥೆಗೆ ತಕ್ಕುದಾಗಿ ‘ಬಯಲುಸೀಮೆ’ ಎಂಬ ಶೀರ್ಷಿಕೆಯಿದಲಾಗಿದೆ. ಸಂಪೂರ್ಣವಾಗಿ ಉತ್ತರ ಕರ್ನಾಟಕ ಶೈಲಿಯಲ್ಲಿ ತಯಾರಾಗಿರೋ ಈ ಸಿನಿಮಾ ನಾನಾ ಮಜಲುಗಳ, ಮೈನವಿರೇಳಿಸೋ ತಿರುವುಗಳ ಮೂಲಕ ಪ್ರೇಕ್ಷಕರನ್ನು ಬೇರೆಯದ್ದೇ ಜಗತ್ತಿಗೆ ಕೊಂಡೊಯ್ಯುವಂತೆ ಮೂಡಿ ಬಂದಿದೆ ಎಂಬ ಆತ್ಮವಿಶ್ವಾಶ ಚಿತ್ರತಂಡದಲ್ಲಿದೆ.

ಲಕ್ಷ್ಮಣ್ ಸಾ ಶಿಂಗ್ರಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಬಯಲುಸೀಮೆಯನ್ನು ವರುಣ್ ಕಟ್ಟೀಮನಿ ನಿರ್ದೇಶನ ಮಾಡಿದ್ದಾರೆ. ಎಂಭತ್ತರ ದಶಕ ಮತ್ತು ಈವತ್ತಿನ ಕಾಲಮಾನದೊಂದಿಗೆ ಜುಗಲ್ಬಂದಿ ಹೊಂದಿರೋ ಈ ಕಥೆ, ಆ ಎರಡು ಕಾಲಘಟ್ಟಗಳನ್ನೂ ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಕಟ್ಟಿಕೊಟ್ಟಿದೆಯಂತೆ. ಸಾಹೂರಾವ್ ಶಿಂಧೆ ಎಂಬ ಶ್ರೀಮಂತ ವ್ಯಕ್ತಿಯ ಸುತ್ತ ಬಯಲು ಸೀಮೆಯ ಕಥೆ ಚಲಿಸುತ್ತೆ. ಆತನ ಸುತ್ತ ಹಬ್ಬಿಕೊಳ್ಳುವ ಅಕ್ರಮ ಸಂಬಂಧ, ಅದರ ಹಿನ್ನೆಲೆಯಲ್ಲೊಮದು ಲವ್ ಸ್ಟೋರಿ ಹಾಗೂ ಅದರ ಗರ್ಭದಲ್ಲಿಯೇ ಹುಟ್ಟಿಕೊಳ್ಳೋ ರಣ ದ್ವೇಷ… ಕ್ಷಣ ಕ್ಷಣವೂ ಪ್ರೇಕ್ಷಕರನ್ನು ತುದೀ ಸೀಟಿಗೆ ತಂದು ಕೂರಿಸುವಂಥಾ ಗಟ್ಟಿ ಕಥೆಯೊಂದಿಗೆ ಚಿತ್ರತಂಡ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಉತ್ಸಾಹದಲ್ಲಿದೆ.
ಈ ಸಿನಿಮಾದಲ್ಲಿ ಭಯ ಹುಟ್ಟಿಸೋ ಪಾತ್ರಗಳಿವೆ. ಅದಕ್ಕೆ ಅತಿರಥ ಮಹಾರಥ ಕಲಾವಿದರುಗಳು ಜೀವ ತುಂಬಿದ್ದಾರೆ. ಬೃಹತ್ ತಾರಾಗಣ ಹೊಂದಿರೋ ಬಯಲು ಸೀಮಿಯಲ್ಲಿ ಬಿಸಿಲ ನಾಡ ಪ್ರತಿಭೆಗಳೂ ಮಿಂಚಲು ಅಣಿಯಾಗಿದ್ದಾರೆ. ಟಿ.ಎಸ್ ನಾಗಾಭರಣ, ರವಿಶಂಕರ್, ಸಂಯುಕ್ತ ಹೊರನಾಡು, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ವರುಣ್ ಕಟ್ಟೀಮನಿ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕೈನವರ್, ಪ್ರದೀಪ್ ರಾಜ್ ಮುಂತಾದವರ ತಾರಾಗಣ ಈ ಸಿನಿಮಾದಲ್ಲಿದೆ. ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಮತ್ತು ರಾಮು ಅವರ ನೃತ್ಯ ಸಂಯೋಜನೆಯಿಂದ ಬಯಲುಸೀಮೆ ಸಿಂಗರಿಸಿಕೊಂಡಿದೆ.












