ಕಂಡ್ಲೂರು ಮರಳುಗಾರಿಕೆ ಪ್ರಕರಣ:ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಠಾಣೆಗೆ ಕಲ್ಲೆಸೆದ ಕಿಡಿಗೇಡಿಗಳು

ಕುಂದಾಪುರ : ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವವರನ್ನು ಬಂಧಿಸಿದ ಹಿನ್ನಲೆಯಲ್ಲಿ ಠಾಣೆಗೆ ಕಲ್ಲೆಸೆದು ಧಾಂಧಲೆ ನಡೆಸಿದ ಘಟನೆ ಕುಂದಾಪುರದ ಕಂಡ್ಲೂರಿನಲ್ಲಿ ನಡೆದಿದೆ. ಕುಂದಾಪುರ ಕಂಡ್ಲೂರು ವ್ಯಾಪ್ತಿಯಲ್ಲಿ ಅಕ್ರಮ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸಂದರ್ಭ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀಧರ ನಾಯ್ಕ್ ನೇತೃತ್ವದಲ್ಲಿ ಓಮ್ನಿ ಸಹಿತ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದು ದಂಧೆಕೋರರು ಠಾಣೆಯ ಮುಂಭಾಗದಲ್ಲಿ ಜಮಾಯಿಸಿ ಆರೋಪಿ ಹಾಗೂ ವಾಹನವನ್ನು ಬಿಡುಗಡೆಮಾಡುವಂತೆ ಆಗ್ರಹಿಸಿದ್ದಾರೆ. ಆದರೆ ಎಸೈ ಶ್ರೀಧರ ನಾಯ್ಕ್ ಪ್ರಕರಣ ದಾಖಲಿಸುವುದಾಗಿಯೂ ಆರೋಪಿಯನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದರು. ಇದರಿಂದ ಆಕ್ರೋಶಿತಗೊಂಡ ದಂಧೆಕೋರರರಲ್ಲಿ ಕೆಲವು ಕಿಡಿಗೇಡಿಗಳು ಠಾಣೆಯ ಛಾವಣಿಯ ಮೇಲೆ ಕಲ್ಲೆಸೆದಿದ್ದಾರೆ. ಈ ಸಂದರ್ಭ ಪೊಲೀಸರು ಠಾಣೆಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲು ಯತ್ನಿಸಿದಾಗ ಒಬ್ಬ ಸಿಕ್ಕಿಬಿದ್ದಿದ್ದು ನಾಲ್ಕು ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರು ಓಡಿಹೋದ ಘಟನೆ ನಡೆದಿದೆ, ಸದ್ಯ ಕಂಡ್ಲೂರು ಠಾಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.