ತಮಿಳುನಾಡಿನ ಕಂಚಿ ಕಾಮಕೋಟಿ ಪೀಠ: ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನ

ಚೆನ್ನೈ: ತಮಿಳುನಾಡಿನ ಕಂಚಿ ಕಾಮಕೋಟಿ ಪೀಠದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಇಂದು ನಿಧಿ ಸಂಗ್ರಹ ಅಭಿಯಾನ ನಡೆಯಿತು.
ಕಂಚಿ ಕಾಮಕೋಟಿ ಮಠದ ಶ್ರೀ ವಿಜಯೇಂದ್ರ ಸರಸ್ವತೀ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಅಯೋಧ್ಯೆ ರಾಮಮಂದಿರ ನಿರ್ಮಾಣ ಟ್ರಸ್ಟ್ ಸದಸ್ಯರು ಆಗಿರುವ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಅಯೋಧ್ಯೆ ರಾಮಮಂದಿರ ನಿರ್ಮಾಣ ಟ್ರಸ್ಟ್ ಕೋಶಾಧಿಕಾರಿ ಗೋವಿಂದಗಿರಿ ಮಹಾರಾಜ್, ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಂಚಿ ಮಠದ ಭಕ್ತ ಉದ್ಯಮಿ ಮೋಹನ್ ಮಂದಿರ ನಿರ್ಮಾಣಕ್ಕೆ ₹5 ಕೋಟಿ ದೇಣಿಗೆ ನೀಡಿದರು. ಕಂಚಿ ಮಠದ ವತಿಯಿಂದ ಮತ್ತು ಪೇಜಾವರ ಮಠದ ಭಕ್ತರಿಂದ ಒಂದೇ ದಿನ ಒಂದು ಕೋಟಿ ರೂ‌ಪಾಯಿ ದೇಣಿಗೆ ಸಂಗ್ರಹ ಮಾಡಲಾಯಿತು. ಆ ಮೂಲಕ ಒಟ್ಟು ₹6 ಕೋಟಿ ದೇಣಿಗೆ ಸಂಗ್ರಹ ಮಾಡಲಾಯಿತು.
ಇಂದು ಬೆಳಿಗ್ಗೆ ಕಂಚಿ ಮಠದಲ್ಲಿ ಮಂದಿರ ನಿರ್ಮಾಣದ ಯಶಸ್ಸಿಗಾಗಿ ರಾಮತಾರಕ ಹೋಮ ಜಪ ಪಾರಾಯಣ ನಡೆಸಲಾಯಿತು.