ಮೂಡಬಿದಿರೆ ಕರಿಂಜೆ ವಿನೂ ವಿಶ್ವನಾಥ ಶೆಟ್ಟಿ ಹೃದಯಘಾತದಿಂದ ಸಾವು: ಕಂಬಳ ದಿಗ್ಗಜ ಇನ್ನು ನೆನಪು ಮಾತ್ರ

ಮೂಡಬಿದಿರೆ: ತುಳುನಾಡಿನ ಕಂಬಳ ಕ್ಷೇತ್ರದ ದಿಗ್ಗಜ ಮೂಡಬಿದಿರೆ ಕರಿಂಜೆ ವಿನೂ ವಿಶ್ವನಾಥಶೆಟ್ಟಿ (೫೪) ಅವರು ಭಾನುವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಹೊಕ್ಕಾಡಿಗೊಳಿಯಲ್ಲಿ ನಡೆದ ಜೋಡುಕರೆ ಕಂಬಳದಿಂದ ವಾಪಾಸಾಗುತ್ತಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕಳೆದ ಹಲವು ವರ್ಷಗಳಿಂದ ಕಂಬಳದ ಕೋಣಗಳ ಯಜಮಾನರಾಗಿ, ಕಂಬಳದ ಉಳಿವಿಗೆ ಸಾಕಷ್ಟು ಕೊಡುಗೆ ನೀಡಿದ ಕೀರ್ತಿ ಅವರದು. ಕೋಣಗಳಿಗಾಗಿ ಈಜುಕೊಳ, ಆಧುನಿಕ ಮಾದರಿಯ ಸೌಲ`ಗಳನ್ನು ಕಲ್ಪಿಸಿ ಹೆಸರುವಾಸಿಯಾಗಿದ್ದರು. ಹಲವು ವರ್ಷಗಳಲ್ಲಿ ಅವರ ಕೋಣಗಳು ಚ್ಯಾಂಪಿಯಾನ್ ಆಗಿ ಮೆರೆದಿವೆ. ಶನಿವಾರ ಹಾಗೂ ರವಿವಾರ ನಡೆದ ಹೊಕ್ಕಡಿಗೋಳಿ ಕಂಬಳದಲ್ಲೂ ಹಗ್ಗ ಹಿರಿಯ ವಿಭಾಗದಲ್ಲಿ ಅವರ ಕೋಣಗಳು ಪ್ರಥಮ ಸ್ಥಾನ ಪಡೆದಿದ್ದವು. ಅವರ ಸಾದನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿತ್ತು. ಸಾವಿರಾರು ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ.

ಅಪ್ರತಿಮ ಸಮಾಜಸೇವಕ 

ದುಬೈನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅವರು, ಓರ್ವ ಅಪ್ರತಿಮ ಸಮಾಜ ಸೇವಕ ಕೂಡ ಆಗಿದ್ದರು. ಅದೆಷ್ಟು ಬಡ ಕುಟುಂಬಗಳಿಗೆ ಅವರು ಅನ್ನದಾತರಾಗಿದ್ದಾರೆ. ಅವರ ನಿಧನದ ಸುದ್ದಿ ತಿಳಿದು ಸಾವಿರಾರು ಮಂದಿ ಕಂಬನಿ ಮಿಡಿದಿದ್ದಾರೆ.