ಕಂಬಳ ಕೋಣಕೆ ಇವರು ತಯಾರಿಸೋ ಅಲಂಕಾರಿಕ ಹಗ್ಗಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ.
ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳಿಗೆ ಅಲಂಕಾರಿಕವಾಗಿ ಹಗ್ಗಗಳನ್ನು ಹೆಣೆಯುತ್ತಾರೆ. ಕಂಬಳ ಕೋಣಗಳ ಜೋಡಿಯನ್ನು ಅಲಂಕರಿಸಲು  ಈ ಬಣ್ಣದ ಹಗ್ಗಗಳೇ ಆಧಾರ. ಈ ಚಂದದ  ಹಗ್ಗ ನೇಯುವ ಕಲೆಯು ಅನೇಕರಿಗೆ ತಿಳಿದಿಲ್ಲ .

ನೆತ್ತಿಯ ಮೇಲೆ ಕೋಡಿಗೆ ಕಟ್ಟಿದ ಹಗ್ಗ, ಗೊಂಡೆ, ಬೆಳ್ಳಿ ಪದಕದೊಂದಿಗೆ ಸಿಂಗಾರಕ್ಕೂ ಕೋಣಗಳಿಗೆ ಕಿರೀಟವಿಟ್ಟಂತೆ ಕಾಣುತ್ತದೆ.ಈ ಹಗ್ಗವನ್ನೇ ಮಾಡುವವರ ಕತೆ ಹೇಳ್ತೇವೆ ಕೇಳಿ.

ಕಂಬಳ ಕೋಣಗಳ ಜೋಡಿಯನ್ನು ಸಿಂಗರಿಸುವ ಹಗ್ಗಗಳನ್ನು ನೇಯುವ ಪ್ರವೃತ್ತಿಗೆ ಹೆಸರಾದವರು ಹೆರ್ಮುಂಡೆ ಗ್ರಾಮದ ಪ್ರಶಾಂತ್. ಕೋಣದ ತಲೆ ಮೇಲೆ ಕಟ್ಟುವ ನೆತ್ತಿಹಗ್ಗ , ನೊಗಕ್ಕೆ ಕಟ್ಟುವ ಕೋಡಿಹಗ್ಗ, ಎರಡು ಕೋಣಗಳಿಗೆ ಕಟ್ಟುವ ಪಣಕೆ, ಒಡಿಸುವ ಹಗ್ಗ , ಪನೆ ಹಗ್ಗಗಳನ್ನು ನೇಯುತ್ತಾರೆ.

ವೃತ್ತಿಯಲ್ಲಿ ಕೃಷಿಕರಾಗಿದ್ದರೂ, ಇತರ ಸಮಯದಲ್ಲಿ ಕಂಬಳದ ಪರಿಕರಗಳನ್ನು ತಯಾರಿಸುತ್ತಾರೆ ಪ್ರಶಾಂತ್. ಇವರು  ಕಂಬಳ ಅಕಾಡೆಮಿಯ ಓಟಗಾರರೂ ಆಗಿ ಪರಿಣತಿ ಪಡೆದವರು, ಚೆಂಡೆಯ ಕೋಲುಗಳನ್ನು ತಯಾರಿಸುವುದರಲ್ಲೂ ನಿಪುಣರು, ಕಳೆದ ಹತ್ತು ವರ್ಷಗಳಿಂದ ಕಂಬಳ ಹಗ್ಗಗಳನ್ನು ನೇಯ್ದು ಕೊಡುತ್ತಿದ್ದಾರೆ. ಕಂಬಳ ಬೆತ್ತವನ್ನೂ ನೇಯುತ್ತಾರೆ. ವರ್ಷ ಕ್ಕೆ ಎರಡು ಲಕ್ಷಕ್ಕೂ ಹೆಚ್ಚು ದುಡಿಯುತ್ತಾರೆ. ಹವ್ಯಾಸವೇ ಇವರ ವೃತ್ತಿ ಕ್ಷೇತ್ರಕ್ಕೆ ವಿಫುಲ ಅವಕಾಶವನ್ನು ನೀಡುತ್ತಿದೆ.

“ಕೃಷಿ ಜೊತೆ ಸಮಯ ಸಿಕ್ಕಾಗ ಕೋಣಗಳ ಹಗ್ಗವನ್ನು ನೇಯುತ್ತೇನೆ. ಬೈಂದೂರಿನಿಂದ ಹಿಡಿದು ಕಾಸರಗೋಡಿನ ಕಡೆಯಿಂದಲೂ ಬರುವ ಬೇಡಿಕೆಗೆ ಅನುಗುಣವಾಗಿ ಹಗ್ಗವನ್ನು ನೇಯುತ್ತೇನೆ. ಪ್ರಶಕ್ತ ಸಾಲಿನಲ್ಲಿ ಹೆಚ್ಚು ಬೇಡಿಕೆ ಇದೆ  ಎನ್ನುತ್ತಾರೆ ಪ್ರಶಾಂತ್.ಇವರ ಸಂಪರ್ಕ ಸಂಖ್ಯೆ 8197366497

ರಾಮ್ ಅಜೆಕಾರು