Kambala: ನೀವು ಒಳ್ಳೆಯ ಕ್ರೀಡಾಪಟುಗಳಾ? ಹಾಗಾದರೆ ಕಂಬಳ ಗದ್ದೆಯ ಅಖಾಡ ಸಿದ್ಧವಾಗಿದೆ! ಈ ಚಾನ್ಸ್‌ ಮಿಸ್‌ ಮಾಡಬೇಡಿ

ಕಂಬಳ ಓಟಗಾರರಾಗಬೇಕು ಅನ್ನೋ ಕನಸು ಕಾಣುತ್ತಿರುವ ಯುವಕರೇ, ನಿಮಗಾಗಿ ಇಲ್ಲಿದೆ ಸುವರ್ಣ ಅವಕಾಶ. ಸೆಪ್ಟೆಂಬರ್ 6ರಂದು ಕಾರ್ಕಳ ಮಿಯಾರಿನ ಕಂಬಳ ಕರೆಯಲ್ಲಿ ಕಂಬಳ ಓಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 15ರಿಂದ 35 ವರ್ಷದ ಯುವಕರು ಭಾಗವಹಿಸಬಹುದು.

ಉಡುಪಿ ಕಾರ್ಕಳ: ಕಂಬಳದ ಅಂಕಣದಲ್ಲಿ ಓಟಗಾರನಾಗಿ (Runner) ಮಿಂಚಬೇಕು ಎಂದು ಕನಸು ಕಾಣುತ್ತಿರುವ ಯುವಕರಿಗೆ ಉತ್ತಮ ಅವಕಾಶವೊಂದು ಬಂದಿದೆ. ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ (Karnataka Sports Association) ಮಾನ್ಯತೆ ಪಡೆದ ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕಂಬಳ ಓಟಗಾರ ತರಬೇತಿ ಶಿಬಿರಕ್ಕೆ ಆಯ್ಕೆ ಪ್ರಕ್ರಿಯೆ ಸೆಪ್ಟೆಂಬರ್ 6ರಂದು ನಡೆಯಲಿದೆ. ಆಯ್ಕೆ ಪ್ರಕ್ರಿಯೆ ಕಾರ್ಕಳ ತಾಲೂಕಿನ ಮಿಯಾರಿನ ಕಂಬಳ ಕರೆಯಲ್ಲಿ ಬೆಳಗ್ಗೆ 9.30ಕ್ಕೆ ನಡೆಯಲಿದ್ದು, ಭಾಗವಹಿಸುವ ಯುವಕರು ಹಾಗೂ ಕಂಬಳ ಓಟಗಾರರು ಬೆಳಗ್ಗೆ 9ರಿಂದ 10 ಗಂಟೆಯೊಳಗೆ ಸ್ಥಳಕ್ಕೆ ಹಾಜರಾಗಿ ನೋಂದಣಿ ಮಾಡಿಸಿಕೊಳ್ಳಬೇಕು.

15ರಿಂದ 35 ವರ್ಷದವರಿಗೆ ಅವಕಾಶ

ಈ ತರಬೇತಿ ಶಿಬಿರಕ್ಕೆ 15ರಿಂದ 35 ವರ್ಷದೊಳಗಿನ ಯುವಕರನ್ನು ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳ ದೈಹಿಕ ಕ್ಷಮತೆಯನ್ನು ಗುರುತಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಬಾರಿ ಆಯ್ಕೆ ಪ್ರಕ್ರಿಯೆಯಿಂದ ಒಟ್ಟು 30ರಿಂದ 35 ಮಂದಿ ಓಟಗಾರರನ್ನು ತರಬೇತಿಗೆ ಆಯ್ಕೆ ಮಾಡುವ ಉದ್ದೇಶ ಹೊಂದಲಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ತರಬೇತಿ ಶಿಬಿರಕ್ಕೆ ಈ ಬಾರಿ ನೂರಕ್ಕೂ ಅಧಿಕ ಯುವಕರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.