ಈ ಹುಡುಗಿಯ ಕಥೆ ನಿಜಕ್ಕೂ ಹೆಮ್ಮೆ ತರುತ್ತದೆ. ಈ ಹುಡುಗಿಯ ಸಾಧನೆ ಕೇಳಿದರೆ ಕಂಬಳದ ಅಭಿಮಾನಿಗಳು ನಿಜಕ್ಕೂ ಖುಷಿಪಡುತ್ತಾರೆ. ಹೌದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಂಬಳ ಅಂದರೆ ಅದೊಂದು ಸಂಸ್ಕೃತಿ, ಅದೊಂದು ತುಳುವರ ಉಸಿರಿದ್ದಂತೆ. ಕಂಬಳ ಪುರುಷ ಪ್ರಧಾನವಾಗಿದ್ದು ಪುರುಷರೇ ಈ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.
ಆದರೆ ಇತ್ತೀಚೆಗೆ ಕಾರ್ಕಳ ಮಿಯ್ಯಾರುವಿನಲ್ಲಿ ಹುಡುಗಿಯೊಬ್ಬಳು ಕಂಬಳ ಕೋಣದ ಯಜಮಾನಿಕೆಯ ನೇತೃತ್ವ ವಹಿಸಿ ಕಂಬಳ ಕರೆಗೆ ಇಳಿದಿದ್ದಾಳೆ. ಅದಕ್ಕೆ ಸಾಕ್ಷಿಯಾಗಿದೆ ಮೊನ್ನೆಯ ಮಿಯ್ಯಾರು ಕಂಬಳ. ಈ ಮೂಲಕ ಕಂಬಳದ ಇತಿಹಾಸದಲ್ಲಿ ಇದೊಂದು ಹೊಸ
ಸಂಚಲನ ಉಂಟು ಮಾಡಿದೆ. ಕುಂದಾಪುರದ ಬೊಳ್ಳಂಪಳ್ಳಿ ಗ್ರಾಮದ ಈ ಹುಡುಗಿಯ ಹೆಸರು ಚೈತ್ರ ಪರಮೇಶ್ವರ್ ಭಟ್. ಕಾಲ್ತೋಡಿನ ಆರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಈಕೆ. ಇವಳೇ ಈಗ ಸುದ್ದಿಯಾದವಳು. ಪರಮೇಶ್ವರ್ ಭಟ್ ದಂಪತಿಯ ಇಬ್ಬರು ಮಕ್ಕಳಾದ ಚೈತ್ರ ಹಾಗೂ ರಾಮ್ ಭಟ್ ಇಬ್ಬರೂ ಕಂಬಳದ ಪ್ರೇಮಿಗಳು.
ಚೈತ್ರಾಗೆ ಕಂಬಳ ಕೋಣಗಳೆಂದರೆ ತುಂಬಾ ಪ್ರೀತಿ. ಚಿಕ್ಕ ವಯಸ್ಸಿನಲ್ಲೇ ಕಂಬಳ ಕೋಣಗಳಿಗೆ ಸ್ನಾನಮಾಡಿಸುತ್ತಾ, ಹುರುಳಿ ಬೇಯಿಸಿ ನಿತ್ಯದ ಕೆಲಸಗಳಲ್ಲಿ ತಂದೆ ತಾಯಿ ಜೊತೆ ಸಹಾಯ ಮಾಡುತ್ತಾಳೆ. ಕೋಣಗಳ ಜೊತೆ ಆಟವಾಡುತ್ತಾ ಬೆಳೆದ ಈ ಹುಡುಗಿಯ ಜೊತೆಗೆ ಕೋಣಗಳು ಖುಷಿಯಿಂದ ಹೆಜ್ಜೆ ಹಾಕುತ್ತವೆ.
ಶ್ರೀನಿವಾಸ ಗೌಡರಂತೆ ಮಿಂಚೋ ಆಸೆ:
ಪರಮೇಶ್ವರ್ ಭಟ್ ಕಳೆದ 25 ವರ್ಷಗಳಿಂದ ಕೋಣಗಳನ್ನು ಸಾಕುತ್ತಾ ಬಂದಿದ್ದಾರೆ. ಪರಮೇಶ್ವರ್ ಭಟ್ ಅವರ ಮನೆಯಲ್ಲಿ ಕಂಬಳದ 110 ಮೀಟರ್ ಉದ್ದದ ಕರೆಯಿದ್ದು, ಪ್ರತಿ ವಾರದಲ್ಲಿ ಕಂಬಳ ಕೋಣಗಳನ್ನು ಓಡಿಸುತ್ತಾ ಅಭ್ಯಾಸ ನಡೆಸುತ್ತಿದ್ದಾಳೆ ಈ ಚೈತ್ರ. ತಾನು ಕೂಡ ಅಶ್ವತ್ಥಾಪುರ ಶ್ರಿನಿವಾಸ ಗೌಡ ನಂತೆ ಮಿಂಚಬೇಕು ಎನ್ನುವುದು ಇವಳ ಕನಸು.
ಪರಮೇಶ್ವರ್ ಭಟ್ ಮೂಲತಃ ಕೃಷಿಕರಾಗಿದ್ದು ಕಂಬಳದ ಕೋಣಗಳನ್ನು ಸಾಕುತ್ತಾ ಬಂದವರು.ಕಳೆದ ನಾಲ್ಕು ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಕಂಬಳಗಳಲ್ಲಿ ಭಾಗವಹಿಸುತ್ತಿದ್ದಾರೆ. ಚೈತ್ರ, ತಂದೆ ಪರಮೇಶ್ವರ ಭಟ್ ಜೊತೆ ಎಲ್ಲ ಕಂಬಳಗಳಲ್ಲಿಯು ಭಾಗವಹಿಸುತ್ತ ಆಸಕ್ತಿ ಬೆಳೆಸಿಕೊಂಡಿದ್ದಾಳೆ.ಆದರೆ ಕೋಣಗಳನ್ನು ಕರೆಗೆ ಇಳಿಸುವ ಅವಕಾಶ ಅವಳಿಗೆ ಸಿಕ್ಕಿರಲಿಲ್ಲ.
ಆದರೆ ಮಿಯ್ಯಾರು ಕಂಬಳದಲ್ಲಿ ಆ ಅವಕಾಶ ಸಿಕ್ಕಿಯೇ ಬಿಟ್ಟಿತು. ಆಕೆಯೆ ಸ್ವತಃ ಬೊಳ್ಳಂಬಳ್ಳಿಯ ಕಂಬಳ ಕೋಣಗಳನ್ನು ಕರೆಗೆ ಇಳಿಸುವ ನೇತೃತ್ವ ವಹಿಸಿದ್ದಳು.
ಕಂಬಳದ ಸಮಯದಲ್ಲಿ ಕಂಬಳ ಕೋಣದ ತಯಾರಿಯಲ್ಲಿ ಶೃಂಗಾರದಲ್ಲಿ ಚೈತ್ರ ಶ್ರಮ ವಹಿಸುತ್ತಾಳೆ. ಕಂಬಳ ಕೋಣದ ಪ್ರೀತಿ ಆಕೆಗೆ ಬಾಲ್ಯದಿಂದಲೇ ಬಂದಿದ್ದು ಮನೆಯ ಕಂಬಳ ಕರೆಯಲ್ಲಿ ಆಕೆಯೆ ಕೋಣಗಳನ್ನು ತೆಗೆದುಕೊಂಡು ಓಡಿಸುತ್ತಾಳೆ. ಆಕೆಗೆ ಪ್ರೋತ್ಸಾಹ ಸಿಕ್ಕಿದರೆ
ಜ್ಯೂನಿಯರ್ ವಿಭಾಗದಲ್ಲಿ ಆಕೆಯನ್ನು ಭಾಗವಹಿಸುವಂತೆ ಮಾಡಬೇಕೆನ್ನುವುದು ನನ್ನ ಆಶಯವಾಗಿದೆ ಎನ್ನುತ್ತಾರೆ ಚೈತ್ರಳ ತಂದೆ
ಪರಮೇಶ್ವರ್ ಭಟ್ ಬೊಳ್ಳಂಪಳ್ಳಿ.
ಚೈತ್ರ ಪರಮೇಶ್ವರ್ ಭಟ್, ಕಂಬಳ ಇತಿಹಾಸದಲ್ಲೇ ಮೊದಲ ಬಾರಿ ಹುಡುಗಿಯಾಗಿ ನೇತೃತ್ವ ವಹಿಸಿದ್ದು, ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ಕಂಬಳ ಇದೀಗ ತೆರೆದುಕೊಂಡಂತಾಗಿದೆ. ಎಲ್ಲಾ ಕ್ರೀಡೆಗಳಲ್ಲಿ ಮಹಿಳೆಯರು ಪ್ರತಿನಿಧಿಸುತ್ತಿದ್ದಾರೆ.
ಕಂಬಳಕ್ಕೆ ಜಾಗತಿಕ ಮಟ್ಟದಲ್ಲಿ ಪ್ರೋತ್ಸಾಹ ಸಿಗುತ್ತಿದ್ದು, ಹೊಸತನಕ್ಕೆ ತಕ್ಕಂತೆ ಕಂಬಳದಲ್ಲಿ ಮಹಿಳಾ ಓಟಗಾರರಿಗೂ ಪ್ರಾಶಸ್ತ್ಯ ನೀಡಲು ಕಂಬಳ ಅಕಾಡೆಮಿಯ ಮೂಲಕ ಸೂಕ್ತ ತರಬೇತಿ ನೀಡಲು ನಾವು ಬದ್ದರಾಗಿದ್ದೆವೆ ಎನ್ನುತ್ತಾರೆ ಕಂಬಳ ಅಕಾಡೆಮಿಯ ಸಂಚಾಲಕರಾದ ಗುಣಪಾಲ್ ಕಡಂಬ.
«ರಾಮ್ ಅಜೆಕಾರ್