ಉಡುಪಿ: ಕಾರೊಂದು ಅಡ್ಡ ಬಂದ ಪರಿಣಾಮ ತಪ್ಪಿಸಲು ಮುಂದಾದಾಗ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಎಕ್ಸ್‌ಪ್ರೆಸ್ ಬಸ್‌ವೊಂದು ರಸ್ತೆ ಪಕ್ಕದ
ಮಿಲ್ಕ್ ಬೂತ್ ಹಾಗೂ ಹೋಟೆಲ್‌ಗೆ ನುಗ್ಗಿದ ಘಟನೆ ಸೋಮವಾರ ಬೆಳಿಗ್ಗೆ ಕಡಿಯಾಳಿಯಲ್ಲಿ ಸಂಭವಿಸಿದೆ.
ಕಾರ್ಕಳದಿಂದ ಉಡುಪಿ ಕಡೆ ಬರುತ್ತಿದ್ದ ಬಸ್ ಕಾರಿಗೆ ಡಿಕ್ಕಿಹೊಡೆಯುವುದನ್ನು ತಪ್ಪಿಸಲು ಬಸ್ ಚಾಲಕ ಏಕಾಏಕಿಯಾಗಿ ಬ್ರೇಕ್ ಹಾಕಿದ್ದರಿಂದ ಬಸ್ ನಿಯಂತ್ರಣವನ್ನು ಕಳೆದುಕೊಂಡು ರಸ್ತೆ ಪಕ್ಕದ ಮಾಂಸಾಹಾರಿ ಹೋಟೆಲ್ ಮತ್ತು ಮಿಲ್ಕ್ ಬೂತಿಗೆ ನುಗ್ಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ.
ಬಸ್ ಮಿಲ್ಕ್‌ಬೂತ್‌ಗೆ ನುಗ್ಗುವ ದೃಶ್ಯಾವಳಿಗಳು ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮಿಲ್ಕ್ ಬೂತ್‌ನ ಮುಂಭಾಗಕ್ಕೆ ಸಂಪೂರ್ಣ ಹಾನಿಯಾಗಿದೆ. ಹೊರಗೆ ಹಾಲಿನ ಬಾಕ್ಸ್‌ನಲ್ಲಿ ಇರಿಸಲಾಗಿದ್ದ ಹಾಲಿನ ಪ್ಯಾಕೇಟ್‌ಗಳೆಲ್ಲವೂ ಚೆಲ್ಲಾಪಿಲ್ಲಾಯಾಗಿದ್ದವು.
ಪ್ರತಿದಿನ ಅಂಗಡಿ ಮುಂದೆ ಹತ್ತಾರು ಮಂದಿ ಗ್ರಾಹಕರು ಇರುತ್ತಾರೆ. ಆದರೆ ಇಂದು ಯಾರು ಇರದಿದ್ದರಿಂದ ಭಾರೀ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.