ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು: ಈಶಪ್ರಿಯ ಶ್ರೀ

ಉಡುಪಿ: ಇಂದು ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಅವುಗಳ ಬಳಕೆ ಮಾಡಬೇಕು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಹೇಳಿದರು.
ಕೃಷ್ಣಮಠದ ರಾಜಾಂಗಣದಲ್ಲಿ ಮಂಗಳವಾರ ಕೃಷಿಕ ಅಬೂಬಕ್ಕರ್‌ ಮತ್ತು ನೇಕಾರ ಸಂಜೀವ ಶೆಟ್ಟಿಗಾರ್‌ ಕೊರಂಗ್ರಪಾಡಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿ, ಕಲೆ, ಪರಂಪರೆಯನ್ನು ಉಳಿಸಬೇಕಾದರೆ ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು. ಯುವಜನರಿಗೆ ದೇಶೀಯ ಉತ್ಪನ್ನಗಳ ಮಹತ್ವವನ್ನು ತಿಳಿಸಬೇಕು. ಆಗ ನಮ್ಮ ತನವನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.
ನೇಕಾರಿಕೆ ಬಹಳ ಪರಿಶ್ರಮದ ಕೆಲಸವಾಗಿದ್ದು, ಇದನ್ನು ಉಳಿಸಿಕೊಂಡಿರುವ ಸಂಜೀವ ಶೆಟ್ಟಿಗಾರ್‌ ಹಾಗೂ ರಾಸಾಯನಿಕ ಗೊಬ್ಬರ ಬಳಸದೆ ಭೂಮಿ ಫಲವತ್ತತೆ ಕಾಯ್ದುಕೊಳ್ಳಲು ಶ್ರಮಿಸುತ್ತಿರುವ ಅಬೂಬಕ್ಕರ್‌ ಅವರಿಗೆ ನೀಡಿರುವ ಗೌರವ ಇತರರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಹಿರಿಯ ಕಲಾವಿದ ಪುರುಷೋತ್ತಮ ಅಡ್ವೆ, ಕಾರ್ಕಳ ಕದಿಕೆ ಟ್ರಸ್ಟ್‌ನ ಮಮತಾ ರೈ, ಪದ್ಮಶಾಲಿ ವಿಶ್ವಸೇವಾ ಪ್ರತಿಷ್ಠಾನ ಸಂಚಾಲಕ ರತ್ನಾಕರ ಇಂದ್ರಾಳಿ, ನಗರಸಭಾ ಸದಸ್ಯ
ಮಂಜುನಾಥ ಮಣಿಪಾಲ, ತಾಲ್ಲೂಕು ಪಂಚಾಯಿತಿ ಸದಸ್ಯೆ ನಳಿನಿ ಪ್ರದೀಪ್‌ ರಾವ್‌ ಉಪಸ್ಥಿತರಿದ್ದರು.