ಮಂಗಳೂರು: ಕಡಬ ತಾಲೂಕು ಸುಬ್ರಹ್ಮಣ್ಯ ಅರಣ್ಯ ವಿಭಾಗದ ಭಾಗಿಮಲೆ ಮೀಸಲು ಅರಣ್ಯದಲ್ಲಿ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಲೊಕೇಶ್ ಎಂಬವರ ಮೇಲೆ ಅರಣ್ಯಾಧಿಕಾರಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ನೀತಿ ತಂಡದ ನೇತೃತ್ವದಲ್ಲಿ ಸುಬ್ರಹ್ಮಣ್ಯ ಸಮೀಪ ಕೆಂಜಳದ ಅರಣ್ಯ ಇಲಾಖೆಯ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು.
ಕೆಲವು ದಿನಗಳ ಹಿಂದೆ ಭಾಗಿಮಲೆ ಮೀಸಲು ಅರಣ್ಯದಲ್ಲಿ ಮರ ಕಳವು ನಡೆದಿತ್ತು, ಈ ಮರಗಳನ್ನು ಲೋಕೇಶ್ ಎಂಬವರು ಕಳವು ನಡೆಸಿದ್ದಾರೆಂದು ಆರೋಪಿಸಿ ಲೋಕೇಶ್ ಅವರನ್ನು ಅರಣ್ಯಧಿಕಾರಿಗಳು ಬಂಧಿಸಿ, ಅವರಿಗೆ 25ಸಾವಿರ ದಂಡ ವಿಧಿಸಿದ್ದರು. ಈ ಸಂದರ್ಭದಲ್ಲಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ನೀತಿ ತಂಡದ ಅಧ್ಯಕ್ಷರು ಹಾಗೂ ಗ್ರಾಮಸ್ಥರು, ಕೊಂಬಾರು ಗ್ರಾಮದ ಕಾಪಾರು ನಿವಾಸಿ ಲೋಕೇಶ್ ಎಂಬವರು ನಿರಾಪರಾಧಿಯಾಗಿದ್ದು ಅವರ ಮೇಲೆ ವಿನಾಃ ಕಾರಣ ಹಲ್ಲೆ ನಡೆಸಲಾಗಿದೆ, ಭಾಗಿಮಲೆ ಮೀಸಲು ಅರಣ್ಯದಲ್ಲಿ ಬೃಹತ್ ಗಾತ್ರದ ಮರ ಕಳವು ನಡೆದಿದ್ದು ಇದರ ಹಿಂದೆ ದೊಡ್ಡ ಜಾಲವಿರುವ ಬಗ್ಗೆ ಸಂಶಯವಿದೆ. ಆದರೆ ಇಲಾಖೆಯ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕಲು ಅಮಾಯಕನ ಮೇಲೆ ದಂಡ ವಿಧಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಲೋಕೇಶ್ ಅವರಿಗೆ ಹಲ್ಲೆ ನಡೆಸಿದ ಅರಣ್ಯ ರಕ್ಷಕ ಅಶೋಕ್ ಹಾಗೂ ಅವರಿಗೆ ಸಹಕರಿಸಿದ ಇತರ ಅರಣ್ಯ ಅಧಿಕಾರಿಗಳನ್ನು ಕೂಡಲೇ ಕರ್ತವ್ಯದಿಂದ ಅಮಾನತು ಮಾಡುವಂತೆ ಪ್ರತಿಭಟನಾಕಾರು ಆಗ್ರಹಿಸಿದ್ದಾರೆ.
ಇದಕ್ಕೆ ಒಂದು ವಾರದ ಗಡುವನ್ನು ಪ್ರತಿಭಟನಾಕಾರರು ನೀಡಿದರು. ಇಲ್ಲದೇ ಹೋದಲ್ಲಿ ಮುಂದಿನ ಸೋಮವಾರ ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ಕಚೇರಿಯ ಮುಂದೆ ಇದಕ್ಕಿಂತಲೂ ಹೆಚ್ಚಿನ ಜನರನ್ನು ಸೇರಿಸಿ ಬಾರಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಮಾತ್ರವಲ್ಲದೆ ಈ ಮಧ್ಯೆ ನೀತಿ ತಂಡದಿಂದ ಬೆಂಗಳೂರು ಮಾನವ ಹಕ್ಕುಗಳ ಕಚೇರಿಗೂ ದೂರು ಕೂಡ ನೀಡಲಾಗಿದೆ.
ಜಿಲ್ಲಾ ಅರಣ್ಯ ಅಧಿಕಾರಿಗಳ ಆದೇಶದಂತೆ ಸ್ಥಳಕ್ಕೆ ಬಂದ ವಲಯ ಅರಣ್ಯ ಅಧಿಕಾರಿ ಶಿವಾನಂದ ಶಿವಶಿಂಪಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಅರಣ್ಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಲಾಯಿತ್ತು. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು, ತಂಡದ ಸದಸ್ಯರು ಉಪಸ್ಥಿತರಿದ್ದರು.