ಪುಲ್ವಾಮದಲ್ಲಿ ಇತ್ತೀಚೆಗೆಷ್ಟೇ ಹುತಾತ್ಮರಾದ ವೀರ ಯೋಧರ ನೆನಪು ಎಲ್ಲರನ್ನೂ ಬಿಟ್ಟೂ ಬಿಡದೇ ಕಾಡುತ್ತಿದೆ. ವೀರಯೋಧರ ಮೇಲಿನ ದಾಳಿಯನ್ನು ಅಷ್ಟು ಸುಲಭಕ್ಕೆ ಅರಗಿಸಿಕೊಳ್ಳುವುದು ನಮಗೆಲ್ಲಾ ತೀರಾ ಕಷ್ಟದ ಸಂಗತಿ. ವೀರ ಯೋಧರ ನೆನಪನ್ನು ನಾವು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ದಿನಚರಿಯಲ್ಲಿ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಲೇ ಇರುತ್ತೇವೆ.
ಕಾರ್ಕಳದ ಮಾರ್ಕೆಟ್ ರಸ್ತೆಯ ಗುರ್ಜಿ ದೇವರಾಯ ಕಿಣಿ ಸ್ಟೇಶನರಿ ಶಾಪ್ ನ ಸದಾಶಿವ ಕಾಮತ್ ಎನ್ನುವ ವ್ಯಾಪಾರಿಯೊಬ್ಬರು ತಾವು ಕೆಲಸ ಮಾಡುತ್ತಿರುವ ಅಂಗಡಿಯಲ್ಲೇ ಹುತಾತ್ಮರಾದ ವೀರಯೋಧರಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಂಗಡಿಯ ಒಂದು ಬದಿಯಲ್ಲಿ ತಾವೇ ಥರ್ಮಾಕೋಲ್ ಬಳಸಿ ವೀರ ಯೋಧರ ಹಾಗೂ ಭಾರತದ ಭವ್ಯತೆಯನ್ನು, ದೇಶ ಭಕ್ತಿಯನ್ನು ಸಾರುವ ಕಲಾಕೃತಿಯನ್ನು ತಯಾರಿಸಿದ್ದಾರೆ. ಕಾರ್ಗಿಲ್ ಹುತಾತ್ಮ ಯೋಧರ ನೆನಪನ್ನು ಸಾರುವ ಕಲಾಕೃತಿಗಳೂ ಕೂಡ ಇವರು ಕೆಲಸ ಮಾಡುವ ಅಂಗಡಿಯಲ್ಲಿ ಶೋಭಿಸುತ್ತಿವೆ. ಮೊನ್ನೆಯಷ್ಟೆ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರ ನೆನಪನ್ನು ಇಲ್ಲಿನ ಕಲಾಕೃತಿಗಳು ಕಲುಕುವಂತಿದೆ.ಅಂಗಡಿಗೆ ಬರುವ ಗ್ರಾಹಕರಲ್ಲೂ ದೇಶ ಪ್ರೇಮವನ್ನು ಬಿಡಿದೆಬ್ಬಿಸುವಂತಿದೆ.
ವಿಭಿನ್ನ ಕಲಾಕೃತಿ,ಪತ್ರಿಕೆಗಳ ಸಂಗ್ರಹಗಾರ:
ಸದಾನಂದ ಕಾಮತ್ ಅವರಿಗೆ ಅತ್ಯಂತ ಹಳೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಅತ್ಯಮೂಲ್ಯ ಲೇಖನಗಳನ್ನು, ಚಿತ್ರಗಳನ್ನು, ವಿಜ್ಙಾನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಸಂಗ್ರಹಿಸುವ ಆಸಕ್ತಿ ಅಪಾರ.ಥರ್ಮಾಕೊಲ್ ಬಳಸಿ ವಿಭಿನ್ನ ಮಾದರಿಯ ಕಲಾಕೃತಿಗಳನ್ನು ಮಾಡುವಲ್ಲಿಯೂ ಇವರು ಸಿದ್ದಹಸ್ತರು. ಸಾವಿರಕ್ಕೂ ಮಿಕ್ಕಿದ ಅತ್ಯಮೂಲ್ಯ ಪೇಪರ್ ಕಟ್ಟಿಂಗ್ಸ್ ಗಳು, ಚಿತ್ರಗಳನ್ನು ಇವರು ತಮ್ಮ ಸಂಗ್ರಹದಲ್ಲಿ ಜೋಪಾನವಾಗಿರಿಸಿದ್ದಾರೆ. ಅಂದ ಹಾಗೆ ಕಾಮತ್ ಅವರು, ಅಪ್ಪಟ ಮೋದಿ ಅಭಿಮಾನಿ. ಪತ್ರಿಕೆಯಲ್ಲಿ ಇಷ್ಟು ವರ್ಷ ಪ್ರಕಟಗೊಂಡ ಮೋದಿಯವರ ಚಿತ್ರ, ಮಾಹಿತಿ, ಎಲ್ಲವನ್ನೂ ಸಂಗ್ರಹಿಸಿಟ್ಟಿದ್ದಾರೆ.
“ಸೈನಿಕರಿಗೆ ಈ ರೀತಿ ಶ್ರದ್ದಾಂಜಲಿ ಸಲ್ಲಿಸಿರುವುದು ಪ್ರದರ್ಶನಕ್ಕಲ್ಲ. ನನ್ನದು ಸಣ್ಣದ್ದೊಂದು ಸೇವೆ ಅಷ್ಟೆ. ಪುಲ್ವಾಮದಲ್ಲಿ ಮಡಿದ ಸೈನಿಕರನ್ನು ಮರೆಯಲು ಸಾಧ್ಯವೇ ಇಲ್ಲ. ಇಲ್ಲಿನ ಕಲಾಕೃತಿಯನ್ನು ನೋಡಿದ ಯಾರಿಗಾದರೂ ದೇಶಪ್ರೇಮ ಜಾಸ್ತಿಯಾದರೆ ಸಾಕು”ಎನ್ನುತ್ತಾರೆ ಕಾಮತರು.
ವಿದ್ಯಾರ್ಥಿಗಳು ತಮ್ಮ ಅಸೈನ್ ಮೆಂಟುಗಳಿಗೆ ಹಳೆಯ ಮಾಹಿತಿಗಳನ್ನು ಪೇಪರ್ ಕಟ್ಟಿಂಗ್ಸ್ ಗಳನ್ನು ಕೇಳಿದರೆ ಅವರಿಗೆ ಬೇಕಾದನ್ನು ಒದಗಿಸಿಕೊಡುವ ಇವರಿಗೆ, ಅದೇ ಒಂದು ಖುಷಿ. ಏನೇ ಆಗಲಿ ವ್ಯವಹಾರದ ನಡುವೆ ಬಿಡುವು ಮಾಡಿಕೊಂಡು ವಿಭಿನ್ನವಾದ ಹವ್ಯಾಸದಲ್ಲೇ ಖುಷಿ ಕಾಣುವ ಇವರಿಗೆ ಪುಟ್ಟದ್ದೊಂದು ಸಲಾಂ.
_ಪ್ರಸಾದ್ ಶೆಣೈ