ಅಪಪ್ರಚಾರಕ್ಕಿಳಿದ ವಾಹಿನಿ ವಿರುದ್ದ ಆಕ್ರೋಶ ; ಕಾನೂನು ಹೋರಾಟಕ್ಕೆ ಸಜ್ಜಾಗಿದ್ದೇನೆ ಎಂದ ಶಾಸಕ.

ಕುಂದಾಪುರ: ನಾನು ಯಡಿಯೂರಪ್ಪನವರ ನಿಕಟವರ್ತಿಯಾಗಿದ್ದು, ಅಪ್ಪಟ ಹಿಂದೂತ್ವಾದಿ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕೆಂದು ಮಹದಾಸೆ ಇಟ್ಟುಕೊಂಡಿದ್ದ ನನ್ನ ಮೇಲೆ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಮ್ ಸುಕುಮಾರ ಶೆಟ್ಟಿ ಹೇಳಿದರು.

ಖಾಸಗಿ ವಾಹಿನಿಯೊಂದರಲ್ಲಿ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಭಿತ್ತರವಾದ ಬೆನ್ನಲ್ಲೇ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಪ್ರಾಮಾಣಿಕವಾಗಿ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ವ್ಯಕ್ತಿ ನಾನು. ಹಣಕ್ಕೆ ಹೆಚ್ಚು ಮಹತ್ವ ಕೊಟ್ಟವನಲ್ಲ. ಹತ್ತು ವರ್ಷಗಳ ಕಾಲ ಕೊಲ್ಲೂರು ದೇವಸ್ಥಾನದ ಆಡಳಿತ ನಡೆಸಿದ್ದೆ. ನನ್ನ ನಿಷ್ಠೆ, ಪ್ರಾಮಣಿಕತೆಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವೇ ಸಾಕ್ಷಿ ಎಂದು ಸುಕುಮಾರ್ ಶೆಟ್ಟಿ ಹೇಳಿದ್ದಾರೆ.

ಟಿವಿ ವಾಹಿನಿಯಲ್ಲಿ ಬಂದ ಕಾಂಗ್ರೆಸ್ ಸೇರ್ಪಡೆ ಸುದ್ದಿ ತುಂಬಾ ನೋವು ತಂದಿದೆ. ಆಸ್ಕರ್ ಫೆರ್ನಾಂಡೀಸ್ ಬಗ್ಗೆ ನನಗೆ ಬಹಳ ಗೌರವವಿದೆ. ಕಳೆದ 18 ವರ್ಷಗಳಿಂದ ನನಗೂ ಅವರಿಗೂ ಯಾವುದೇ ಸಂಪರ್ಕ ಇಲ್ಲ. ಮರಳುಗಾರಿಗೆ ವಿಚಾರದಲ್ಲಿ ಬೆಂಗಳೂರಿಗೆ ಹೋದಾಗ ಸಚಿವ ಖಾದರ್ ಸಿಕ್ಕಿದ್ದರು. ಅಲ್ಲಿ ಅವರನ್ನು ನೋಡಿದ್ದು ಬಿಟ್ಟರೆ ನನ್ನ ಮತ್ತು ಅವರ ನಡುವೆ ಸಂಪರ್ಕವಿಲ್ಲ. ಇನ್ನು ಹರೀಶ್ ಕುಮಾರ್ ಯಾರೆಂದು ಗೊತ್ತಿಲ್ಲ. ಹೀಗಿದ್ದ ಮೇಲೆ ಏಕಾಏಕಿಯಾಗಿ ನನ್ನ ವಿರುದ್ದ ಅಪಪ್ರಚಾರಕ್ಕಿಳಿದಿರುವುದು ಖಂಡನೀಯ ಎಂದರು.

ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿಯವರನ್ನು ಸಚಿವ ಯು.ಟಿ ಖಾದರ್ ಹಾಗೂ ಎಮ್‍ಎಲ್‍ಸಿ ಹರೀಶ್ ಕುಮಾರ್ ನೆರವಿನೊಂದಿಗೆ ಎಐಸಿಸಿ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡೀಸ್ ಸಂಪರ್ಕ ಮಾಡಿದ್ದಾರೆ. ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಗೆ ಮೂರು ಸುತ್ತಿನ ಮಾತುಕತೆಯನ್ನು ನಡೆಸಿದ್ದು, ಶಾಸಕ ಸುಕುಮಾರ್ ಶೆಟ್ಟರು ಕೂಡ ಕಾಂಗ್ರೆಸ್ ಸೇರಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಖಾಸಗಿ ವಾಹಿನಿಯೊಂದರಲ್ಲಿ ಶನಿವಾರ ಮಧ್ಯಾಹ್ನ ಪ್ರಸಾರವಾಗಿತ್ತು.

********

ಒಬ್ಬರ ಬಗ್ಗೆ ಅಪಪ್ರಚಾರ ಮಾಡುವ ಮನಸ್ಥಿತಿ ಸರಿಯಲ್ಲ. ತಿಳುವಳಿಕೆ ಇಲ್ಲದೇ ಒಬ್ಬರ ಯೋಗ್ಯತೆಗೆ ಕಪ್ಪುಚುಕ್ಕೆ ತರುವ ಕೆಲಸವನ್ನೂ ಯಾರೂ ಮಾಡಬಾರದು. ಯಾವ ಮಾಧ್ಯಮದಲ್ಲಿ ನಾನು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತೇನೆ ಎಂದು ಸುದ್ದಿ ಭಿತ್ತರವಾಯಿತೋ ಆ ಮಾಧ್ಯಮದ ವಿರುದ್ದ ಕಾನೂನು ಹೋರಾಟ ನಡೆಸುತ್ತೇನೆ.

-ಸುಕುಮಾರ್ ಶೆಟ್ಟಿ, ಶಾಸಕರು ಬೈಂದೂರು ವಿಧಾನಸಭಾ ಕ್ಷೇತ್ರ