ಉಡುಪಿ: ಸಹಕಾರ ಭಾರತಿ ಮೈಸೂರು ವಿಭಾಗದ ಕಾರ್ಯಕಾರಿಣಿ ಸಭೆಯು ಜುಲೈ 28, ಮಂಗಳವಾರ, ಉಡುಪಿ ಜಿಲ್ಲೆಯ ಶಿರ್ವ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಸಹಕಾರ ಭಾರತಿ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ಹಾಗೂ ಸಂಘಟನಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸುವ ಉದ್ದೇಶದಿಂದ ಈ ವಿಭಾಗ ಮಟ್ಟದ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿದೆ.
ಈ ಸಭೆಯಲ್ಲಿ ಮೈಸೂರು ನಗರ, ಮೈಸೂರು, ಹಾಸನ, ಮಂಡ್ಯ, ಕೊಡಗು (ಮಡಿಕೇರಿ), ಚಿಕ್ಕಮಗಳೂರು, ಮಂಗಳೂರು ಮಹಾನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಸಹಿತ ಒಟ್ಟು 9 ಜಿಲ್ಲೆಗಳ ಸಹಕಾರ ಭಾರತಿ ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು, ಮಹಿಳಾ ಪ್ರಮುಖರು, ಸಹ ಮಹಿಳಾ ಪ್ರಮುಖರು ಹಾಗೂ ಮೈಸೂರು ವಿಭಾಗ ವ್ಯಾಪ್ತಿಯ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಪ್ರಮುಖರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ನಡೆಯಲಿರುವ ಸಭೆಯಲ್ಲಿ ಸಹಕಾರ ಭಾರತಿ ಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕೊಂಕೋಡಿ ಪದ್ಮನಾಭ ಭಟ್ , ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖರಾದ ಶ್ರೀ ಎಸ್. ಆರ್. ಸತೀಶ್ ಚಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಾಣೂರು ನರಸಿಂಹ ಕಾಮತ್ ಹಾಗೂ ರಾಜ್ಯ ಸಂಘಟನಾ ಪ್ರಮುಖರಾದ ಮಂಜುನಾಥ ಬಿ.ಆರ್.ರವರು ಮಾರ್ಗದರ್ಶನ ನೀಡಲಿದ್ದಾರೆ.
ಈ ಕುರಿತು ಸಹಕಾರ ಭಾರತಿ ಮೈಸೂರು ವಿಭಾಗ ಪ್ರಮುಖರಾದ ಮೋಹನ್ ಕುಮಾರ್ ಕುಂಬಳೇಕರ್, ಆತಿಥೇಯ ಉಡುಪಿ ಜಿಲ್ಲಾಧ್ಯಕ್ಷರಾದ ದಿನೇಶ್ ಹೆಗ್ಡೆ ಆತ್ರಾಡಿ, ಹಾಗೂ ಶಿರ್ವ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಸಹಕಾರ ಭಾರತಿ ಉಡುಪಿ ಜಿಲ್ಲಾ ಕೋಶಾಧ್ಯಕ್ಷರಾದ ಪ್ರಸಾದ್ ಶೆಟ್ಟಿಯವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















