ಭಾರತದಲ್ಲಿ 5 ಜಿ ಜಾರಿ ವಿರೋಧಿಸಿ ಕೋರ್ಟ್ ಮೊರೆ ಹೋದ ನಟಿ ಜೂಹಿ ಚಾವ್ಲ: ಕಾರಣವೇನು ಗೊತ್ತಾ?

ನವದೆಹಲಿ:5 ಜಿ ತರಂಗಾಂತರಗಳಿಂದ ಮನುಷ್ಯನ ಆರೋಗ್ಯದ ಮೇಲೆಯೂ ಸೇರಿದಂತೆ ಇಡೀ ದೇಶದ ಪ್ರಾಕೃತಿಕ ಸಂಪನ್ಮೂಲಗಳ ಮೇಲೆಯೂ ಹಾನಿಯಾಗಲಿದೆ. ಜೀವ ವೈವಿದ್ಯಗಳಿಗೂ 5 ಜಿ ಮಾರಕ ಎನ್ನುವ ಮಾಹಿತಿಗಳು ತಜ್ಞರುಗಳಿಂದ ಕೇಳೀ ಬರುತ್ತಿರುವ ಬೆನ್ನಲ್ಲೇ ಇದೀಗ ರೇಡಿಯೊಫ್ರೀಕ್ವೆನ್ಸಿ (ಆರ್ ಎಫ್) ವಿಕಿರಣಗಳ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿರುವ ಬಾಲಿವುಡ್ ನಟಿ ಜೂಹಿ ಚಾವ್ಲ ಭಾರತದಲ್ಲಿ 5 ಜಿ ಜಾರಿ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. 

5 ಜಿ ತಂತ್ರಜ್ಞಾನ ಜಾರಿಯಾದಲ್ಲಿ ಅದರಿಂದ ಈಗಿರುವ ವಿಕರಣಗಳಿಗಿಂತ 10-100 ಪಟ್ಟು ಹೆಚ್ಚಿನ ಆರ್ ಎಫ್ ರೇಡಿಯೇಷನ್ ಜನ ಹಾಗೂ ಪ್ರಾಣಿಗಳ ಮೇಲೆ ಬೀರುತ್ತದೆ ಎಂದು ಜೂಹಿ ಚಾವ್ಲ 5 ಜಿ ಜಾರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೂ.02 ರಂದು ಅರ್ಜಿ ವಿಚಾರಣೆಗೆ ಬರಲಿದೆ.

ಚಾವ್ಲಾ ಅವರ ವಕ್ತಾರರು ಈ ಬಗ್ಗೆ ಹೇಳಿಕೆ ನೀಡಿದ್ದು, 5ಜಿ ತಂತ್ರಜ್ಞಾನ ಮನುಷ್ಯರಿಗೆ ಹಾಗೂ ಎಲ್ಲಾ ವಿಧದ ಜೀವಿಗಳಿಗೆ ಸುರಕ್ಷವಾಗಿರಲಿದೆ ಎಂಬುದನ್ನು ಪ್ರಮಾಣೀಕರಿಸಲು ಹಾಗೂ ಆರ್ ಎಫ್ ರೇಡಿಯೇಷನ್ ಗೆ ಸಂಬಂಧಿಸಿದಂತೆ ಇದಕ್ಕೆ ಪೂರಕವಾದ ಅಧ್ಯಯನಗಳನ್ನು ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

5 ಜಿ ಯೋಜನೆಗಳಿಂದ ಮನುಕುಲ ಹಾಗೂ ಭೂಮಿಯ ಪರಿಸರಕ್ಕೆ ಗಂಭೀರ ಹಾನಿಯುಂಟಾಗಲಿದೆ. ಈಗ ಸಂಗ್ರಹಿಸಲಾಗಿರುವ ಕ್ಲಿನಿಕಲ್ ಸಾಕ್ಷ್ಯಗಳ ಪ್ರಕಾರ ಕ್ಯಾನ್ಸರ್, ಹೃದಯ ಸಮಸ್ಯೆಗಳು, ಮಧುಮೇಹದಂತಹ ಆಧುನಿಕ ನಾಗರಿಕತೆಯ ಆರೋಗ್ಯ ಸಮಸ್ಯೆಗಳು ಎಲೆಕ್ಟ್ರ‍ೋ ಮ್ಯಾಗ್ನೆಟಿಕ್ ಮಾಲಿನ್ಯದಿಂದ ಉಂಟಾಗುತ್ತಿವೆ. ಇದಕ್ಕೆ ಸಂಬಂಧಿಸಿದಂತೆ 10,000 ಅಧ್ಯಯನಗಳಿವೆ ಅದನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.